ಪಿಲಿಕುಳದಲ್ಲಿ ಹಣ್ಣುಗಳ ಉತ್ಸವ, ಹಲಸು ಮೇಳ, ಘಮ ಬೀರದ ಹಲಸು

mng--22 june pilikula mango
Published on

ಮಂಗಳೂರು: ಮಾವು, ಹಲಸು ಮೊದಲಾದ ತಾಜಾ ಹಣ್ಣುಗಳನ್ನು ಬೆಳೆದ ರೈತರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸಲು ಮೇಳಗಳು ಸಹಕಾರಿ ಎಂದು ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.


ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಪಿಲಿಕುಳ ಅರ್ಬನ್ ಹಾಥ್‌ನಲ್ಲಿ ಹಮ್ಮಿಕೊಂಡ ಎರಡು ದಿನಗಳ ಹಣ್ಣುಗಳ ಉತ್ಸವ ಹಾಗೂ ಹಲಸು ಮೇಳವನ್ನು ಶನಿವಾರ ಉದ್ಘಾಟಿಸಿ, ಅವರು ಮಾತನಾಡಿದರು.


ಹಲವಾರು ಹಣ್ಣುಗಳ ಗಿಡಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಹಣ್ಣುಗಳ ಮೌಲ್ಯವರ್ಧಿತ ಉತ್ಪನ್ನಗಳು ಇಲ್ಲಿ ಲಭ್ಯವಿದೆ. ಮಂಗಳೂರು ನಗರದ ಜನತೆಗೆ ಇದೊಂದು ಸದವಕಾಶವಾಗಿದ್ದು, ಕುಟುಂಬ ಸಮೇತ ಈ ಹಣ್ಣುಗಳ ಮೇಳಕ್ಕೆ ಆಗಮಿಸಿ ಖರೀದಿಸಿ ರೈತರಿಗೆ ಪ್ರೋತ್ಸಾಹ ನೀಡಬೇಕು ಎಂದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಪ್ರಧಾನ ವಿಜ್ಞಾನಿ ಡಾ.ಸೂರ್ಯ ಪ್ರಕಾಶ್ ಶೆಣೈ, ಪಿಲಿಕುಳ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್, ಮೂಡುಶೆಡ್ಡೆ ಗ್ರಾ.ಪಂ. ಅಧ್ಯಕ್ಷ ಅನಿಲ್ ಕುಮಾರ್, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಡಳಿತಾಧಿಕಾರಿ ಡಾ.ಅಶೋಕ್ ಕೆ.ಆರ್., ತಾ.ಪಂ. ಮಾಜಿ ಸದಸ್ಯ ಹರೀಶ್ ಕೋಟ್ಯಾನ್ ಮೊದಲಾದವರಿದ್ದರು. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರವೀಣ್ ನಾಯಕ್ ಸ್ವಾಗತಿಸಿದರು.

ಘಮ ಬೀರದ ಹಲಸು
ಪಿಲಿಕುಳದಲ್ಲಿ ಆರಂಭಗೊಂಡ ಹಣ್ಣು ಹಾಗೂ ಹಲಸು ಮೇಳದಲ್ಲಿ ಹಣ್ಣು ಮತ್ತು ಹಲಸಿಗಿಂತ ಇತರೇ ಅಂಗಡಿಗಳು ಹೆಚ್ಚಿದ್ದವು. ಶನಿವಾರ ಮಧ್ಯಾಹ್ನದ ತನಕ ಬೆರಳೆಣಿಕೆಯ ಮಂದಿ ಕಂಡು ಬಂದರು. ಹೊರ ಜಿಲ್ಲೆಯಿಂದ ಮಾವು, ಹಲಸು ಮಾರಾಟಗಾರರ ಸಂಖ್ಯೆಯೂ ಕಡಿಮೆ ಇತ್ತು. ಕೆಲವು ಮಾರಾಟಗಾರರಿಗೆ ಮಧ್ಯಾಹ್ನದ ತನಕ ವ್ಯಾಪರವೇ ಆರಂಭವಾಗಿಲ್ಲ. ತರಹೇವಾರಿ ಹಲಸು, ಮಾವು ಈ ಬಾರಿ ಮೇಳದಲ್ಲಿ ಕಂಡು ಬಂದಿಲ್ಲ. ಬಹಳಷ್ಟು ಮಂದಿ ಸ್ಥಳೀಯ ಮಾರಾಟಗಾರರೇ ಇದ್ದರು. ನಗರದಿಂದ ಹಲಸು ಖರೀದಿಸಲೆಂದು ಆಗಮಿಸಿದವರು ನಿರಾಸೆಗೊಳಗಾದರು.

ಪಿಲಿಕುಳ ಹಲಸು ಮೇಳದಲ್ಲಿ ಹಲಸು, ಹಣ್ಣುಗಳಿಗಿಂತ ಬಟ್ಟೆ, ಎಣ್ಣೆ, ಪಾತ್ರ, ಬ್ಯಾಗ್, ಚಾಟ್ಸ್ ಮಾರಾಟ ಸ್ಟಾಲ್‌ಗಳು ಹೆಚ್ಚಾಗಿವೆ. ಈ ಬಾರಿ ಹೊರ ಜಿಲ್ಲೆಗಳಿಂದ ರೈತರು ಬಂದಿರಬಹುದು ಎಂದು ಹಲಸು ಖರೀದಿಗೆ ಬಂದಿರುವೆ. ಆದರೆ ಇಲ್ಲಿ ವೈವಿಧ್ಯಮಯ ಹಲಸುಗಳೇ ಇಲ್ಲ. ಹಲಸು ಮೇಳದ ಹೆಸರಿನಲ್ಲಿ ಇತರೇ ಮಳಿಗೆಗಳು ಹೆಚ್ಚಾಗಿವೆ.
ಹರಿಪ್ರಸಾದ್ ಉರ್ವಸ್ಟೋರ್
ಖಾಸಗಿ ಉದ್ಯೋಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net