

ಮಂಗಳೂರು : ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಶನಿವಾರ ಆಟಿಕೂಟ ಕಾರ್ಯಕ್ರಮ ನಡೆಯಿತು.
ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಗುತ್ತಿನ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುತ್ತಾರು ನಮಿತ್ ಮತ್ತು ತಂಡದ ಆಟಿ ಕಳಂಜ ಹಾಗೂ ಡ್ಯಾಜಿಲ್ ಸ್ಟುಡಿಯೋದವರು ನಡೆಸಿಕೊಟ್ಟ ಕಂಗೀಲು ನೃತ್ಯ ಗಮನ ಸೆಳೆಯಿತು.
ಮೈಮ್ ರಾಮದಾಸ್ ಮತ್ತು ಶೀನ ನಾಡೋಳಿ ಅವರಿಂದ ತುಳು ಜನಪದ ಹಾಡುಗಳು, ಕಲ್ಕೂರ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಬಪ್ಪನಾಡು ಚಿಕ್ಕಮೇಳದ ಕಲಾವಿದರಿಂದ ‘ಸುದರ್ಶನ ವಿಜಯ’ ಪೌರಾಣಿಕ ಯಕ್ಷಗಾನ ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು.
ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಧಿಕಾರದ ಸದಸ್ಯ ಉಮೇಶ್ ಶೆಟ್ಟಿ, ಆಯುಕ್ತ ವೆಂಕಟೇಶ್, ಪಿಲಿಕುಳ ನಿಸರ್ಗರ್ಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಡಾ. ಕೆ.ವಿ.ರಾವ್, ಬಾಬು ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. ತುಳು ವಿಧ್ವಾಂಸ ಕೆ.ಕೆ. ಪೇಜಾವರ ಕಾರ್ಯಕ್ರಮ ನಿರೂಪಿಸಿದರು.
ಆಟಿಕೂಟದ ವಿಶೇಷ ಭೋಜನ
ಆಟಿ (ಆಷಾಡ)ಯ ಸಂದರ್ಭದಲ್ಲಿ ತುಳುನಾಡಿನ ವಿಶೇಷ ಖಾದ್ಯಗಳಾಗಿ ಗುರುತಿಸಲಾಗಿರುವ ಉಪ್ಪಡ್ ಪಚ್ಚಿಲ್ ಪಲ್ಯ, ಪತ್ರೊಡೆ, ಕಂಚಲ ಅಂಬಡೆ ಮುಂಚಿಕಾಯಿ, ಕಣಿಲೆ ಮೊಳಕೆಬರಿಸಿದ ಹೆಸರುಕಾಳು ಗಸಿ, ನುಗ್ಗೆಸೊಪ್ಪು- ಹಲಸಿನ ಬೀಜ ಸುಕ್ಕ, ತೇವು ತೇಟ್ಲ, ತೊಜಂಕ್ ವಡೆ, ಹಲಸಿನ ಗಾರಿಗೆ ಸೇರಿದಂತೆ ಸುಮಾರು 24 ಬಗೆಯ ವಿಶೇಷ ಭೋಜನವನ್ನು ಏರ್ಪಡಿಸಲಾಗಿತ್ತು.