ಪಿಲಿಕುಳ ವ್ಯಾಘ್ರಗಳಿಗೆ ಬೇಡಿಕೆ : 5 ಗಂಡು, 5 ಹೆಣ್ಣುಗಳಿರುವ ಹುಲಿ ಸಾಮ್ರಾಜ್ಯ : ಪ್ರಾಣಿಗಳ ಮರಣ ಪ್ರಮಾಣವೂ ಕಡಿಮೆ

49
Published on

ಧನಂಜಯ ಗುರುಪುರ

ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಮೃಗಾಲಯದಲ್ಲಿರುವ ಹುಲಿಗಳಿಗೆ ಅನ್ಯ ರಾಜ್ಯಗಳಿಂದ ಭಾರಿ ಬೇಡಿಕೆ ಇದೆ.

ಪ್ರಸಕ್ತ ಇಲ್ಲಿ 5 ಗಂಡು, 5 ಹೆಣ್ಣು ಸೇರಿ ಒಟ್ಟು 10 ಹುಲಿಗಳಿವೆ. ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ವರ್ಷಗಳ ಹಿಂದೆ ಬೆಂಗಳೂರಿನ ಬನ್ನೇರುಘಟ್ಟದಿಂದ ಇಲ್ಲಿಗೆ ತರಿಸಿಕೊಂಡಿದ್ದ ಹೆಣ್ಣು ಹುಲಿ ರಾಣಿ, 2016ರಲ್ಲಿ 5, 2021ರಲ್ಲಿ 3 ಹಾಗೂ 2024ರಲ್ಲಿ 2 ಮರಿಗಳಿಗೆ ಜನ್ಮ ನೀಡಿತ್ತು. ದೇಶ ಅಥವಾ ವಿದೇಶದ ಮೃಗಾಲಯಗಳಲ್ಲಿ ಹುಲಿಯೊಂದು 5 ಮರಿಗಳಿಗೆ ಜನ್ಮ ನೀಡಿರುವುದು ಅಪೂರ್ವ ದಾಖಲೆ.

ಪಿಲಿಕುಳದಲ್ಲಿ ಹುಲಿಗಳ ಇನ್‌ಬ್ರೀಡ್‌ಗೆ ಹೆಚ್ಚು ಮಹತ್ವ ನೀಡಲಾಗುತ್ತಿದ್ದು, ಇದಕ್ಕಾಗಿ ಮೃಗಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಈ ರೀತಿ ಹುಟ್ಟುವ ಮರಿಗಳಿಗೆ ದೇಶದ ಇತರ ಕಡೆಯ ಮೃಗಾಲಯಗಳಿಂದ ಭಾರಿ ಬೇಡಿಕೆ ಇದೆ. ಪ್ರಾಣಿ-ಪಕ್ಷಿಗಳ ವಿನಿಯಮ ಕಾರ್ಯಕ್ರಮದಡಿ ಬೇರೆ ಮೃಗಾಲಯಗಳಿಗೆ ಇಲ್ಲಿ ಹುಟ್ಟಿದ ಹುಲಿ ನೀಡಿ, ಅಲ್ಲಿಂದ ಇಲ್ಲಿಗೆ ಅಗತ್ಯವಿರುವ ಅಪೂರ್ವ ಪಕ್ಷಿ ಹಾಗೂ ಪ್ರಾಣಿಗಳನ್ನು ತರಿಸಿಕೊಳ್ಳಲಾಗುತ್ತದೆ.

ಪಿಲಿಕುಳದಿಂದ ಹೆಚ್ಚಾಗಿ ಕಾಳಿಂಗ ಸರ್ಪ, ಹುಲಿ ರಫ್ತು ಮಾಡಲಾಗುತ್ತದೆ. ಸಂತಾನ ಅಭಿವೃದ್ಧಿಗಾಗಿ ಮುಂದಿನ ಬಾರಿ ಇಲ್ಲಿಗೆ ಮಧ್ಯ ಪ್ರದೇಶದ ಭೋಪಾಲ್ ಮೃಗಾಲಯದಿಂದ 2 ಹುಲಿ(ಒಂದು ಗಂಡು, ಒಂದು ಹೆಣ್ಣು) ಆಮದು ಮಾಡಿಕೊಳ್ಳಲಾಗುತ್ತದೆ. ಜತೆಗೆ ಒಂದಷ್ಟು ಅಪೂರ್ವ ಪಕ್ಷಿಗಳ ಆಗಮನವೂ ಆಗಲಿದೆ.

ರಾಣಿ ಹುಲಿಯು ಕಳೆದ ವರ್ಷ ಜನ್ಮ ನೀಡಿದ್ದ ಗಂಡು ಮತ್ತು ಒಂದು ಹೆಣ್ಣು ಮರಿ ಇದುವರೆಗೆ ವೈದ್ಯಕೀಯ ಆರೈಕೆಯಲ್ಲಿದ್ದವು. ಈ ಹುಲಿಗಳು ಕೆಲವೇ ದಿನಗಳಲ್ಲಿ ಪ್ರವಾಸಿಗರಿಗೆ ಕಾಣಿಸಿಕೊಳ್ಳಲಿವೆ. ಜತೆಗೆ ಇಲ್ಲಿರುವ ಅಪೂರ್ವ ಬಿಳಿ ಹುಲಿಗೆ ಈ ಬಾರಿ ಬ್ರೀಡಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಇದಕ್ಕೆ ಹೆಚ್ಚು ಪೂರ್ವ ತಯಾರಿಯ ಅಗತ್ಯವಿದೆ. ಬಿಳಿ ಹುಲಿಗಳು ಇತರ ಹುಲಿಗಳಿಗಿಂತ ಭಿನ್ನವಾಗಿದ್ದು, ಹೆಚ್ಚು ಕೋಪಗೊಳ್ಳುತ್ತವೆ ಎಂದು ಪಿಲಿಕುಳ ಮೃಗಾಲಯದ ಪ್ರಾಣಿ ಪಾಲಕರೊಬ್ಬರು ತಿಳಿಸಿದ್ದಾರೆ.

ಹೆಚ್ಚು ಜನನ, ಕಡಿಮೆ ಮರಣ

ಕೇಂದ್ರ ಸರ್ಕಾರದ ಮೃಗಾಲಯ ಪ್ರಾಧಿಕಾರದ ಅಂಕಿ ಅಂಶದ ಪ್ರಕಾರ, ಪಿಲಿಕುಳ ಮೃಗಾಲಯದಲ್ಲಿ ದೇಶದಲ್ಲೇ ಅತಿ ಹೆಚ್ಚು ಪ್ರಾಣಿಗಳ ಸಂತಾನಾಭಿವೃದ್ಧಿ ಆಗುತ್ತಿದೆ. ಇಲ್ಲಿ ಪ್ರಾಣಿಗಳ ಮರಣ ಪ್ರಮಾಣ ಕಡಿಮೆ. 2023-24ರಲ್ಲಿ ದೇಶದ ಇತರ ಮೃಗಾಲಯಗಳಲ್ಲಿ ಪ್ರಾಣಿಗಳ ಜನನ ಪ್ರಮಾಣ ಶೇ.8.14 ಇದ್ದರೆ, ಪಿಲಿಕುಳದಲ್ಲಿ ಶೇ.36.47. ದೇಶದ ಮೃಗಾಲಯಗಳಲ್ಲಿ ಪ್ರಾಣಿಗಳ ಮರಣ ಪ್ರಮಾಣ ಶೇ.5.81 ಆಗಿದ್ದರೆ, ಪಿಲಿಕುಳದಲ್ಲಿ ಈ ಪ್ರಮಾಣ ಶೇ.3.37 ಮಾತ್ರ. ಕೇಂದ್ರ ಪ್ರಾಧಿಕಾರ ದೇಶದ ಒಟ್ಟು 34 ಮೃಗಾಲಯಗಳಲ್ಲಿ ಅಧ್ಯಯನ ನಡೆಸಿ ಅಂಕಿ ಅಂಶ ಪ್ರಕಟಿಸಿದೆ.

ಹಕ್ಕಿಗಳ ಜನನ

ಕೇಂದ್ರ ಪ್ರಾಧಿಕಾರದ ಪ್ರತ್ಯೇಕ ಅಂಕಿ ಅಂಶ ಪ್ರಕಾರ, ಪಿಲಿಕುಳದಲ್ಲಿ ಹಕ್ಕಿಗಳ ಜನನ ಪ್ರಮಾಣ ಶೇ.1.15 ಆಗಿದ್ದರೆ, ಮರಣ ಪ್ರಮಾಣ ಶೇ.1.81 ಆಗಿದೆ. ಇವುಗಳಲ್ಲಿ ಸರ್ಪಗಳ(ಸರೀಸೃಪ) ಜನನ ಪ್ರಮಾಣ ಶೇ.4.72, ಮರಣ ಪ್ರಮಾಣ ಶೇ.0.10, ಪ್ರಾಣಿಗಳ ಜನನ ಪ್ರಮಾಣ ಶೇ.36.47, ಮರಣ ಪ್ರಮಾಣ ಶೇ.3.39 ಆಗಿದೆ ಎಂದು ಉಲ್ಲೇಖಿಸಿದೆ.

ಶಾಸಕರನ್ನು ಒಳಗೊಂಡ ವಿಧಾನಮಂಡಲ ಸಮಿತಿ ಇತ್ತೀಚೆಗೆ ಪಿಲಿಕುಳಕ್ಕೆ ಭೇಟಿ ನೀಡಿ, ಮೃಗಾಲಯದ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇತರ ಮೃಗಾಲಯಗಳಿಗೆ ಹೋಲಿಸಿದರೆ ಪ್ರಕೃತಿ ರಮಣೀಯ ಪರಿಸರದಲ್ಲಿರುವ ಈ ಮೃಗಾಲಯ ಅತಿ ಸುಂದರವಾಗಿದೆ ಎಂದು ಸಮಿತಿ ಅಧ್ಯಕ್ಷ ಶಿವಣ್ಣ ಹೇಳಿದ್ದರು. ಅನುದಾನದ ಕೊರತೆಯಿಂದ ಜಿರಾಫೆ, ಝೀಬ್ರಾ, ಗೊರಿಲ್ಲ, ಪೆಂಗ್ವಿನ್ ಆಮದು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಸಾರ್ವಜನಿಕರು, ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ಈ ಕೊರತೆ ನೀಗಿಸುವ ಪ್ರಯತ್ನ ಮುಂದುವರಿದಿದೆ. ಜಯಪ್ರಕಾಶ್ ಭಂಡಾರಿ, ನಿರ್ದೇಶಕರು, ಪಿಲಿಕುಳ ಜೈವಿಕ ಉದ್ಯಾನ https://www.vijayavani.net/farewell-ceremony-for-a-retired-officer https://www.vijayavani.net/cooperation-for-the-construction-of-modeAl-layout

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net