

ಮಂಗಳೂರು: ನವರಾತ್ರಿ ಉತ್ಸವದ ವೇಳೆ ಕೆಲವೊಂದು ಷರತ್ತುಗಳೊಂದಿಗೆ ಹುಲಿವೇಷ ಪ್ರದರ್ಶನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಅನುಮತಿ ನೀಡಲಾಗಿದೆ.
ಒಂದು ತಂಡದಲ್ಲಿ 10 ವೇಷಧಾರಿಗಳು ಇರಬಹುದು. ಜತೆಗೆ ಸಹಾಯಕರ ತಂಡವೂ ಇರಬಹುದು. ಹರಕೆ ರೂಪದಲ್ಲಿ ದೇವಸ್ಥಾನಗಳಲ್ಲಿ ನೀಡುವ ಪ್ರದರ್ಶನಕ್ಕೆ ಮಾತ್ರ ಅವಕಾಶವಿರುತ್ತದೆ. ದೇವಸ್ಥಾನದ ಆವರಣದ ಒಳಗೆ ಮಾತ್ರ ಹುಲಿವೇಷ ಪ್ರದರ್ಶನ ನೀಡಬಹುದು. ಹೊರಗೆ, ಸಾರ್ವಜನಿಕ ಸ್ಥಳಗಳಲ್ಲಿ ಮಾಡುವಂತಿಲ್ಲ. ಮದ್ಯ ಸೇವನೆ ಮಾಡಿ ಪ್ರದರ್ಶನ ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ದೈಹಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ವ್ಯವಸ್ಥೆ ಮಾಡಿರಬೇಕು. ಯಾವುದೇ ಉಲ್ಲಂಘನೆಯಾದಲ್ಲಿ ದೇವಸ್ಥಾನದ ಆಡಳಿತಗಾರರು ಹೊಣೆಯಾಗುತ್ತಾರೆ ಎಂದು ತಿಳಿಸಿದ್ದಾರೆ.
ಎಲ್ಲ ದೇವಸ್ಥಾನಗಳಲ್ಲಿಯೂ ದೂರು/ಸಲಹೆ ಪೆಟ್ಟಿಯನ್ನು ಭಕ್ತರ ಗಮನಕ್ಕೆ ಬರುವ ಸ್ಥಳದಲ್ಲಿಯೇ ಇಡಬೇಕು. ಈ ಬಗ್ಗೆ 15 ದಿನಗಳೊಳಗೆ ಎಲ್ಲ ದೇವಸ್ಥಾನಗಳು ಕ್ರಮ ಕೈಗೊಳ್ಳಲು ಸೂಚಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.