ಸಂತರ ನಡೆ ತಾಂಡಾ ಕಡೆ ಯಾತ್ರೆ, ಮತಾಂತರ ತಡೆ-ದುಶ್ಚಟಗಳ ಕುರಿತು ಜಾಗೃತಿ

BANJARA YATRE
ವಿಜಯಪುರ ನಗರದ ಬಂಜಾರಾ ಭವನದಲ್ಲಿ ಲಿಂಗಸೂರಿನ ಸಿದ್ಧಲಿಂಗೇಶ್ವರ ಶ್ರೀಗಳು ಸುದ್ದಿಗೋಷ್ಠಿ ನಡೆಸಿದರು. ಮುರಾರಿ ಮಹಾರಾಜರು, ಭೀಮಶಿ ಮಹಾರಾಜರು, ಗೋಪಾಲ ಮಹಾರಾಜರು ಇದ್ದಾರೆ.
Published on

ವಿಜಯಪುರ: ಕುಡಿತ, ಜೂಜಾಟ ಮತ್ತಿತರ ದುಶ್ಚಟಗಳಿಗೆ ಬಲಿಯಾಗುತ್ತಿರುವ ತಾಂಡಾಗಳ ಯುವಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ‘ಸಂತರ ನಡೆ ತಾಂಡಾ ಕಡೆ ಯಾತ್ರೆ’ ಹಮ್ಮಿಕೊಳ್ಳಲಾಗಿದ್ದು, ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ ಎಂದು ಲಿಂಗಸೂರಿನ ಸಿದ್ಧಲಿಂಗೇಶ್ವರ ಶ್ರೀಗಳು ಹೇಳಿದರು.

ಅಖಿಲ ಕರ್ನಾಟಕ ಬಂಜಾರಾ ಧರ್ಮ ಗುರು ಮಹಾಸಭಾದಿಂದ ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ರಾಜ್ಯದ ವಿವಿಧ ತಾಂಡಾಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಗಿದ್ದು, ಇದೀಗ ವಿಜಯಪುರ ಜಿಲ್ಲೆಯಲ್ಲಿ ಯಾತ್ರೆ ಮುಂದುವರಿಸಲಾಗಿದೆ ಎಂದು ಶುಕ್ರವಾರ ನಗರದ ಬಂಜಾರಾ ಭವನದಲ್ಲಿ ನಡೆದ ಸುದ್ದಿಗೋಷ್ಠಿ ಅವರು ತಿಳಿಸಿದರು.

ನಿಡಗುಂದಿ, ಕೊಲ್ಹಾರ, ಬಸವನಬಾಗೇವಾಡಿ ಮುಗಿಸಿಕೊಂಡು ಇದೀಗ ವಿಜಯಪುರ ನಗರಕ್ಕೆ ಬಂದಿದ್ದಾಗಿಯೂ, ತಾಂಡಾದ ಯುವಜನತೆ ದುಶ್ಚಟಗಳಿಂದ ಮುಕ್ತರಾಗಬೇಕೆಂಬ ಉದ್ದೇಶ ಹೊಂದಿರುವುದಾಗಿಯೂ ತಿಳಿಸಿದರು.

ಇತ್ತೀಚೆಗೆ ಬಂಜಾರಾ ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮಾತ್ರವಲ್ಲ ಮತಾಂತರ ಕೂಡ ಆಗುತ್ತಿದ್ದಾರೆ. ಹೀಗಾಗಿ ಅವರಲ್ಲಿ ತಿಳಿವಳಿಕೆ ಮೂಡಿಸಲಾಗುತ್ತಿದೆ. ಸನ್ಮಾರ್ಗದಲ್ಲಿ ನಡೆಯಲು ಬೇಕಾದ ಅವಕಾಶ ಕಲ್ಪಿಸಲಾಗುತ್ತಿದೆ. ಸೇವಾಲಾಲರ ವಿಚಾರಧಾರೆಗಳನ್ನು ಬಿತ್ತಲಾಗುತ್ತಿದೆ ಎಂದರು.

ಈ ಯಾತ್ರೆಗೆ ಅದ್ದೂರಿ ಸ್ವಾಗತ ಸಿಗುತ್ತಿದೆ. ಮಹಿಳೆಯರು, ಮಕ್ಕಳಾದಿಯಾಗಿ ಎಲ್ಲ ಸ್ತರದ ಜನ ಸೇರುತ್ತಿದ್ದಾರೆ. ಸಮಾಜದ ಜನರು ಬಹಳ ಖುಷಿ ಆಗುತ್ತಿದ್ದಾರೆ. ನಮ್ಮ ಮಕ್ಕಳನ್ನು ಶಾಲೆಗೆ ಕಳುಸುತ್ತೇವೆ. ಮತಾಂತರ ಆಗಲ್ಲ ಅಂತ ಭರವಸೆ ನೀಡುತ್ತಿದ್ದಾರೆ. ಅವರ ಪ್ರೀತಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆ ಎಂದರು.

ಮುರಾರಿ ಮಹಾರಾಜರು, ಭೀಮಶಿ ಮಹಾರಾಜರು, ಗೋಪಾಲ ಮಹಾರಾಜರು, ನಾಗುವ ಮಹಾರಾಜರು, ರಾಷ್ಟ್ರೀಯ ಬಂಜಾರ ಪರಿಷದ್ ರಾಜ್ಯಾಧ್ಯಕ್ಷ ಪ್ರಕಾಶ ಚವಾಣ್, ಧನಸಿಂಗ್ ಮಹಾರಾಜ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net