ಜೈನ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿ ಪ್ರವಾಸಿತಾಣ ಘೋಷಣೆಗೆ ವಿರೋಧ

udp-21-jain protest
Published on

ಉಡುಪಿ: ಜಾರ್ಖಂಡ್ ರಾಜ್ಯದ ಗಿರಡಿ ಜಿಲ್ಲೆಯಲ್ಲಿರುವ ಜೈನ ಧರ್ಮದ ಪರಮೋಚ್ಚ ಪವಿತ್ರ ತೀರ್ಥಕ್ಷೇತ್ರ ಸಮ್ಮೇದ ಶಿಖರ್ಜಿಯನ್ನು ಪುವಾಸೋದ್ಯಮ ಇಲಾಖೆ ಪ್ರವಾಸಿತಾಣವಾಗಿ ಘೋಷಿಸಿರುವುದನ್ನು ಖಂಡಿಸಿ ಜೈನ ಸಮುದಾಯದವರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಆಕಾಶ್‌ರಾಜ್ ಜೈನ್, ಪಾವನ ಕ್ಷೇತ್ರವಾದ ಸಮ್ಮೇದ ಶಿಖರ್ಜಿ ಜೈನ ಧರ್ಮದ 20 ತೀರ್ಥಂಕರರು ಮುಕ್ತಿ ಹೊಂದಿದ ಸ್ಥಳವಾಗಿದೆ. ಜೈನರಿಗೆ ಈ ಕ್ಷೇತ್ರದ ದರ್ಶನ ಮಾಡಿದರೆ ಸಕಲ ಪಾಪಗಳು ಕಳೆದು ಹೋಗುತ್ತದೆ ಎಂಬ ನಂಬಿಕೆ ಇದೆ. ವಫೇಲಾ ರಾಜವಂಶದ ವಿರಾಢವಲ ಮತ್ತು ವಿಶಾಲದೇವನ ಆಳ್ವಿಕೆಯಲ್ಲಿ ಪ್ರಧಾನಮಂತ್ರಿಯಾಗಿದ್ದ ವಾಸ್ತುಪಾಲನು ಶಿಖರವನ್ನು ಜೈನರ ತೀರ್ಥಕ್ಷೇತ್ರವೆಂದು ಘೋಷಿಸಿದ್ದಾನೆ. ಮೊಗಲ್ ದೊರೆ ಅಕ್ಬರನು ಕೂಡ ಇತಿಹಾಸದ ದಾಖಲೆಗಳನ್ನು ಪರಿಶೀಲಿಸಿ ಇದು ಜೈನರ ತೀರ್ಥಕ್ಷೇತ್ರ ಎಂದು ಆದೇಶ ಹೊರಡಿಸಿದ್ದಾನೆ. ಬ್ರಿಟಿಷರೂ ಕೂಡ ಸಮ್ಮೇದ ಶಿಖರ್ಜಿ ಪುಣ್ಯಕ್ಷೇತ್ರ ಎಂದಿದ್ದಾರೆ. ಆದರೆ ಸ್ವಾತಂತ್ರ್ಯ ನಂತರ ಬಂದ ಸರ್ಕಾರಗಳು ಅಲ್ಪಸಂಖ್ಯಾತರಾದ ಜೈನರ ತೀರ್ಥಕ್ಷೇತ್ರದ ವಿಚಾರದಲ್ಲಿ ಅಭದ್ರತೆಯ ವಾತಾವರಣ ನಿರ್ಮಿಸುತ್ತಿವೆ. ಜೈನರ ವಿರೋಧದ ನಡುವೆಯೂ ಜಾರ್ಖಂಡ್ ರಾಜ್ಯ ಸರ್ಕಾರ ಈ ಪವಿತ್ರ ಸ್ಥಳವನ್ನು ಪುವಾಸಿತಾಣವನ್ನಾಗಿ ಘೋಷಿಸಿ ಮೋಜುಮಸ್ತಿಯ ಕೇಂದ್ರವನ್ನಾಗಿಸುವ ಹುನ್ನಾರ ನಡೆಸಿದೆ. ಹೀಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಪವಿತ್ರ ಕ್ಷೇತ್ರವನ್ನು ರಕ್ಷಿಸಬೇಕು. ಪ್ರವಾಸಿತಾಣ ಬದಲು ಪುಣ್ಯಕ್ಷೇತ್ರವೆಂದು ಘೋಷಿಸಬೇಕು ಎಂದು ಆಗ್ರಹಿಸಿದರು.

ಉಡುಪಿ ಜೈನ ಮಿಲನ್ ಅಧ್ಯಕ್ಷೆ ದೀಪಾ ರಾಜೇಶ್, ಕಾರ್ಕಳ ಅಧ್ಯಕ್ಷೆ ಮಾಲತಿ ವಸಂತರಾಜ್, ಬಜಗೋಳಿ ಅಧ್ಯಕ್ಷ ಭರತ್‌ರಾಜ್ ಜೈನ್, ಅಜೆಕಾರು ಅಧ್ಯಕ್ಷ ಪುಷ್ಪರಾಜ್ ಜೈನ್, ರೆಂಜಾಳ ಅಧ್ಯಕ್ಷ ಸತೀಶ್ ಜೈನ್, ವಲಯ ನಿರ್ದೇಶಕ ಮಹಾವೀರ ಹೆಗ್ಡೆ, ನಿರ್ದೇಶಕ ಪ್ರಸನ್ನ ಕುಮಾರ್, ಜೈನ ಪುರೋಹಿತ ಸಂಘದ ಸುರೇಂದ್ರ ಇಂದ್ರ, ಸನ್ಮಿತ್ರ ಸಂಘದ ಶೀತಲ್ ಜೈನ್, ದ.ಕ. ಜೈನ ಯುವ ಸಂಘದ ಪಾರ್ಶ್ವನಾಥ ಜೈನ್ ಉಪಸ್ಥಿತರಿದ್ದರು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆಗಮಿಸಿ ಮನವಿ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net