

ಮೂಡಿಗೆರೆ: ಉತ್ತರಾಖಂಡ ರಾಜ್ಯದ ಕೇದಾರನಾಥ ಯಾತ್ರೆಗೆ ತೆರಳಿದ್ದ ತಾಲೂಕಿನ ಜನ್ನಾಪುರ ಗ್ರಾಮದ ಗಿರೀಶ್(25) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರಿನ ಸ್ನೇಹಿತನೊಂದಿಗೆ ಜು.28ರಂದು ಕೇದಾರನಾಥ ಯಾತ್ರೆಗೆ ತೆರಳಿದ್ದ ಗಿರೀಶ್ ಅಲ್ಲಿಗೆ ತಲುಪುವ ಮುನ್ನವೇ ಸೋಮವಾರ ಹೃಷಿಕೇಶದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ದೇಹವನ್ನು ತರಲು ಅವರ ಕುಟುಂಬದವರು ಜಿಲ್ಲಾಡಳಿತದ ನೆರವು ಕೋರಿದ್ದಾರೆ. ಆ.2ರಂದು ಶವ ಜನ್ನಾಪುರಕ್ಕೆ ತಲುಪುವ ನಿರೀಕ್ಷೆ ಇದೆ. ಗಿರೀಶ್ ತಂದೆ ಚಂದ್ರ ಅಡುಗೆ ಗುತ್ತಿಗೆದಾರ.
ಗಿರೀಶ್ ಯಾತ್ರೆಯ ಅವಧಿಯಲ್ಲಿ ನನ್ನೊಂದಿಗೆ ಸತತವಾಗಿ ಫೋನ್ ಸಂಪರ್ಕದಲ್ಲಿದ್ದ. ಆತ ಸ್ನೇಹಿತನೊಂದಿಗೆ ಕೇದಾರನಾಥದ ಕಡೆಗೆ ಪ್ರಯಾಣಿಸುತ್ತಿರುವಾಗ ಹೃಷಿಕೇಶದಲ್ಲಿ ಊಟಕ್ಕೆಂದು ಹೋಟೆಲ್ಗೆ ತೆರಳುವಾಗ ದೇವಸ್ಥಾನವೊಂದರ ಆವರಣದಲ್ಲಿ ಹೃದಯಘಾತವಾಗಿ ಬಿದ್ದಿದ್ದಾನೆ. ಜತೆಗಿದ್ದ ಆತನ ಸ್ನೇಹಿತ ಅಲ್ಲಿನ ಪೊಲೀಸರ ನೆರವಿನೊಂದಿಗೆ ಆತನನ್ನು ಏಮ್ಸ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಗಿರೀಶ್ ಸಂಬಂಧಿ ಶಿಲ್ಪಾ ಎಂಬುವರು ಮಾಹಿತಿ ನೀಡಿದ್ದಾರೆ.