ತ್ಯಾಜ್ಯಗಳಿಗೆ ಸರ್ಕಾರಿ 'ನಿವೇಶನ' ಆಸರೆ!!

Ayyo 2 (2)
Published on

ಆಸ್ಪತ್ರೆಯ ಜಾಗದಲ್ಲಿ ಕಸ ಎಸೆಯುವ ದುರುಳರು

ಹೇಳೋರು-ಕೇಳೋರು ಇಲ್ಲಿಲ್ಲ ಯಾರೂ

ವಿಜಯವಾಣಿ ಸುದ್ದಿಜಾಲ ಉಡುಪಿ

ಸ್ಥಳೀಯ ಆಡಳಿತದಲ್ಲಿ ಬಿಗಿ ಹಿಡಿತ ಇಲ್ಲದಿದ್ದರೆ ಸಾರ್ವಜನಿಕರಿಗೂ ಸಹ ಯಾರದೇ ಭಯ ಇರುವುದಿಲ್ಲ ಎನ್ನುವುದಕ್ಕೆ ನಗರಸಭೆಯ ಸಮೀಪದಲ್ಲೇ ಇರುವ ಸರ್ಕಾರಿ ಹಾಜೀ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿದರ್ಶನವಾಗಿದೆ.

ಅನಾರೋಗ್ಯಕ್ಕೊಳಗಾದ ಜನರ ಆರೋಗ್ಯ ಸುಧಾರಿಸುವ ಈ ಆಸ್ಪತ್ರೆಯ ಪಕ್ಕದ ನಿವೇಶನವೀಗ ಕಸ-ತ್ಯಾಜ್ಯಗಳ ಕೊಂಪೆಯಾಗಿದೆ. ಪರಿಸರದಲ್ಲಿ ಗಬ್ಬು ವಾಸನೆ ಉಂಟಾಗಿದ್ದು, ಈ ಮಾರ್ಗದಲ್ಲಿ ಸಾಗುವವರಿಗೂ ಅಸಹ್ಯವಾಗತೊಡಗಿದೆ.

ಹೊರಗಿನವರ ತ್ಯಾಜ್ಯ

ಇದು ಆಸ್ಪತ್ರೆಗೆ ಸಂಬಂಧಿಸಿದ ಕಸವೂ ಅಲ್ಲ. ನಗರದ ಕೆಲ ಅಂಗಡಿ ಹಾಗೂ ಮನೆಗಳವರು ಇಲ್ಲಿ ಕಸ ಎಸೆಯುತ್ತಾರೆ ಎಂಬ ಆರೋಪ ಕೇಳಿ ಬಂದಿದೆ. ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ತ್ಯಾಜ್ಯವನ್ನೂ ಇಲ್ಲಿಗೇ ತಂದು ಸುರಿಯಲಾಗಿದೆ. ನಗರದಲ್ಲಿ ಹೊಸ ಮಳಿಗೆಗೆಳ ಉದ್ಘಾಟನೆ, ಕಾರ್ಯಕ್ರಮಗಳ ಬಳಿಕ ಉಂಟಾಗುವ ತ್ಯಾಜ್ಯಗಳಿಗೆ ಸರ್ಕಾರಿ ಆಸ್ಪತ್ರೆಯ ನಿವೇಶನ ಆಸರೆಯಾಗಿರುವುದು ನಿಜಕ್ಕೂ ವಿಪರ್ಯಾಸ.

ತಡೆಬೇಲಿ ಮುರಿದು ಹಾನಿ

BOX
ಹಾಜೀ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಈ ನಿವೇಶನದಲ್ಲಿ ಹೆರಿಗೆ ವಿಭಾಗ ಆರಂಭಿಸಿಲು ಕಟ್ಟಡ ನಿರ್ಮಾಣಕ್ಕಾಗಿ ಅಡಿಪಾಯ ತೆಗೆಯಲಾಗಿತ್ತು. ಅದೀಗ 30 ಅಡಿಗೂ ಅಧಿಕ ಆಳದ ಗುಂಡಿಯಂತಾಗಿದ್ದು, ಮಳೆನೀರು ನಿಂತು ದೊಡ್ಡ ಬಾವಿಯಂತಾಗಿದೆ. ಸಾರ್ವಜನಿಕರಿಗೆ ಜೀವಾಪಾಯ ಆಗದಿರಲೆಂದು ತಡೆಬೇಲಿ ಅಳವಡಿಸಲಾಗಿತ್ತು. ಆದರೆ, ಆ ಬೇಲಿಯನ್ನೂ ಮುರಿದು ಕಸ-ತ್ಯಾಜ್ಯಗಳ ರಾಶಿ ತಂದು ಸುರಿಯುತ್ತಿದ್ದಾರೆ. ಸಂಜೆಯಾದ ಬಳಿಕ ಕೆಲವರಿಗೆ ಇದು ಅನೈತಿಕ ತಾಣವೂ ಆಗಿರುತ್ತಿತ್ತು. ಇದೀಗ ತಡೆಬೇಲಿಯೂ ಇಲ್ಲದಿರುವುದು ಅವರಿಗೂ ಅನುಕೂಲ ಕಲ್ಪಿಸಿದಂತಾಗಿದೆ. ತ್ಯಾಜ್ಯ ಎಸೆಯಲು ಸರ್ಕಾರಿ ಸ್ಥಳ ಬಳಸಿಕೊಂಡಿದ್ದು ಹಾಗೂ ನಿವೇಶನದ ಬೇಲಿ ತೆರವುಗೊಳಿಸಿದ್ದೂ ಸಹ ಅಪರಾಧವಾಗಿದೆ. ನಗರಸಭೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ತಾರಾನಾಥ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯ ಜಾಗದಲ್ಲಿ ಕಸ-ತ್ಯಾಜ್ಯ ಎಸೆಯುತ್ತಾರೆ ಎಂದರೆ ನಮ್ಮ ವ್ಯವಸ್ಥೆ ಎತ್ತ ಸಾಗಿದೆ ಎನ್ನುವುದಕ್ಕೆ ಸಾಕ್ಷ್ಯವಾಗಿದೆ. ಹೆರಿಗೆ ವಿಭಾಗದ ಕಟ್ಟಡ ನಿರ್ಮಿಸಲು ತೋಡಿದ ಅಡಿಪಾಯ ದೊಡ್ಡ ಕೆರೆಯಂತಾಗಿದೆ. ಮಳೆ ನೀರು ಸಂಗ್ರಹಗೊಂಡಿರುವ ಆ ಗುಂಡಿಯೊಳಗೆ ಕಸಗಳು ಬಿದ್ದು ಪರಿಸರದ ಸ್ವಾಸ್ಥ್ಯ ಇನ್ನಷ್ಟು ಹದಗೆಡಬಹುದು. ತಡೆಬೇಲಿ ಮುರಿದು ಒಳನುಗ್ಗಿ ಹಸಿಕಸ, ಕಟ್ಟಡದ ತ್ಯಾಜ್ಯ ಎಸೆಯಲಾಗಿದೆ. ತಪ್ಪಿತಸ್ಥರ ವಿರುದ್ಧ ನಗರಸಭೆ ಕ್ರಮ ಕೈಗೊಳ್ಳಬೇಕು. | ನಿತ್ಯಾನಂದ ಒಳಕಾಡು. ಸಮಾಜ ಸೇವಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net