

ಅನ್ಸಾರ್ ಇನೋಳಿ ಉಳ್ಳಾಲ
ಹಲವಾರು ಮಂದಿಗೆ ಉಪಯೋಗಕ್ಕೆ ಲಭ್ಯವಾಗುವ ಪಿಲಾರ್‌ನಿಂದ ಕುಂಪಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಎದುರಾಗಿದ್ದ ಜಮೀನು ಸಮಸ್ಯೆ ಇತ್ಯರ್ಥಗೊಂಡಿದ್ದು ಶಿಲಾನ್ಯಾಸ ನಡೆದ ವರ್ಷದ ಬಳಿಕ ರಸ್ತೆ ನಿರ್ಮಾಣ ಕನಸಿಗೆ ಬಲ ಬಂದಿದೆ.
ಪಿಲಾರ್ ಮಹಾಲಕ್ಷ್ಮಿ ಮಂದಿರದಿಂದ ಕುಂಪಲ ಹೋಗಲು ಅಂಬಿಕಾ ರಸ್ತೆ, ಬೈಪಾಸ್ ಮೂಲಕ ಹೋಗಲು ಉತ್ತಮ ರಸ್ತೆಯಿದೆ. ಆದರೆ ಪಿಲಾರ್ ಪಲ್ಲ ಪರಿಸರವಾಸಿಗಳಿಗೆ ಈ ರಸ್ತೆಗೆ ಬರಬೇಕಾದರೆ ಗದ್ದೆಗಳಲ್ಲಿರುವ ಕಾಲುದಾರಿಯೇ ಗತಿ. ಈ ಭಾಗದಲ್ಲಿ ಸುಮಾರು ನೂರು ಮನೆಗಳಿದ್ದು, ಶಾಲೆ, ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು, ಪ್ರತಿದಿನ ಕೆಲಸಕ್ಕೆ ಹೋಗುವವರು, ತುರ್ತು ಸಂದರ್ಭ ಗದ್ದೆಗಳಲ್ಲಿರುವ ಅತ್ಯಂತ ಕಿರಿದಾದ ಕಾಲುದಾರಿಯಲ್ಲಿ ನಡೆದುಕೊಂಡೇ ಹೋಗಬೇಕು.
ಈ ಹಿನ್ನೆಲೆಯಲ್ಲಿ ಪಿಲಾರ್ ಮಹಾಲಕ್ಷ್ಮಿ ದೇವಸ್ಥಾನದಿಂದ ಪಿಲಾರ್ ಪಲ್ಲ ಮೂಲಕ ಕುಂಪಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಕೋಟ ಶ್ರೀನಿವಾಸ ಪೂಜಾರಿ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ತಮ್ಮ ವಿವೇಚನಾ ನಿಧಿಯಿಂದ 25 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದರು. ಕಳೆದ ಸೆ.30ರಂದು ಕಾಮಗಾರಿಗೆ ಶಿಲಾನ್ಯಾಸವೂ ನಡೆದಿತ್ತು. ಆದರೆ ಇಲ್ಲಿ ಆಸುಪಾಸಿನಲ್ಲಿರುವ ಖಾಸಗಿ ಜಮೀನಿನ ಸಮಸ್ಯೆ ಎದುರಾಗಿದ್ದರಿಂದ ಶಿಲಾನ್ಯಾಸ ಬಳಿಕ ಯಾವುದೇ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ.
ಕಾಮಗಾರಿಗೆ ಚಾಲನೆ: ಇದೀಗ ಬಿಜೆಪಿ ಮುಖಂಡ ಸತೀಶ್ ಕುಂಪಲ ನೇತೃತ್ವದಲ್ಲಿ ಜಮೀನಿನ ಸಮಸ್ಯೆ ಇತ್ಯರ್ಥವಾಗಿದೆ. ಭಾನುವಾರ ಮೊದಲ ಹಂತದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಸಂದರ್ಭ ಸ್ಥಳೀಯ ಮನೆ, ಜಮೀನಿಗೆ ಸಂಬಂಧಪಟ್ಟವರು ಕೆಲವೊಂದು ಸಮಸ್ಯೆಗಳನ್ನೂ ಮುಂದಿಟ್ಟಿದ್ದು, ಅವೆಲ್ಲವನ್ನೂ ಪರಿಹರಿಸಿ, ಸಾರ್ವಜನಿಕರಿಗೆ ಅಗತ್ಯವಿರುವ ರಸ್ತೆ ನಿರ್ಮಿಸುವ ಭರವಸೆಯನ್ನೂ ಸ್ಥಳೀಯರಿಗೆ ನೀಡಲಾಗಿದೆ. ಮುಂದಕ್ಕೆ ಯಾವುದೇ ಅಡೆತಡೆಗಳು ಬರದಿದ್ದರೆ ಶೀಘ್ರದಲ್ಲೇ ವಾಹನ ಸಂಚಾರ ಸಾಧ್ಯವಾಗುವಂತಹ ರಸ್ತೆ ಎದ್ದು ನಿರ್ಮಾಣವಾಗಲಿದೆ.
ಸ್ಥಳೀಯರ ಸಮಸ್ಯೆ ಗಮನದಲ್ಲಿಟ್ಟುಕೊಂಡು ರಸ್ತೆ ನಿರ್ಮಾಣಕ್ಕೆ ಸಲ್ಲಿಸಿದ ಬೇಡಿಕೆ ಮೇರೆಗೆ ಮೂರು ವರ್ಷಗಳ ಹಿಂದೆಯೇ ಕೋಟ ಶ್ರೀನಿವಾಸ ಪೂಜಾರಿ ಅನುದಾನ ಬಿಡುಗಡೆಗೊಳಿಸಿದ್ದಾರೆ. ಬಳಿಕ ಎದುರಾಗಿದ್ದ ಜಮೀನು ಸಮಸ್ಯೆ ಬಗೆಹರಿದಿದ್ದು ಪಿಲಾರ್ ಪಲ್ಲವಾಗಿ ಕುಂಪಲಕ್ಕೆ ಅತ್ಯುತ್ತಮ ಸಂಪರ್ಕ ರಸ್ತೆ ನಿರ್ಮಾಣವಾಗಲಿದೆ. ಇದಕ್ಕೆ ಬೇಕಾಗುವ ಸರ್ಕಾರದಿಂದ ಹೆಚ್ಚಿನ ಅನುದಾನ ಕ್ರೋಡೀಕರಿಸಲಾಗುವುದು. ಸತೀಶ್ ಕುಂಪಲ, ಮಾಜಿ ಉಪಾಧ್ಯಕ್ಷ, ದ.ಕ.ಜಿಪಂ ಸ್ಥಳೀಯ ಪ್ರದೇಶದಲ್ಲಿ ರಸ್ತೆಯೇ ಇಲ್ಲದ ಕಾರಣ ವಯಸ್ಕರು, ವಿದ್ಯಾರ್ಥಿಗಳು ತುರ್ತು ಸಂದರ್ಭ ಮುಖ್ಯರಸ್ತೆ ಸಂಪರ್ಕಿಸಲು ಸಾಕಷ್ಟು ತ್ರಾಸ ಪಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಜಮೀನು ಸಮಸ್ಯೆ ಬಗೆಹರಿಸಿ ಎಲ್ಲರನ್ನೂ ಜತೆಯಾಗಿಸಿ ರಸ್ತೆ ನಿರ್ಮಿಸಲು ಪ್ರಯತ್ನಿಸಲಾಗುತ್ತಿದೆ. ಉದಯ ಗಟ್ಟಿ, ಮಾಜಿ ಸದಸ್ಯ, ಸೋಮೇಶ್ವರ ಗ್ರಾಪಂ