ಪಿಐಎಲ್ ವಿಚಾರಣೆ ಏ. 2ರಂದು

Published on

ಶಿರಸಿ: ಅನಕೃತ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಬೇಕು ಎಂದು ಪರಿಸರವಾದಿಗಳು ದಾಖಲಿಸಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್)ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ಏ. 2ರಂದು ವಿಚಾರಣೆ ನಿಗದಿಗೊಳಿಸಲಾಗಿದೆ. ರಾಜ್ಯ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅರಣ್ಯ ಭೂಮಿ ಹಕ್ಕಿನ ದಾಖಲೆಯ ಸ್ಪಷ್ಟೀಕರಣಕ್ಕೆ ನ್ಯಾಯಾಲಯದಲ್ಲಿ ವಾದ ಮಂಡಿಸಲಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಅರಣ್ಯ ಭೂಮಿ ಹಕ್ಕು ಕಾಯ್ದೆಯಡಿ ತಿರಸ್ಕಾರವಾದ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಿ, ಅರಣ್ಯೀಕರಣ ಮಾಡಬೇಕೆಂದು ದೇಶದ ಎಂಟು ಪರಿಸರ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ 2008 ರಲ್ಲಿ ದಾಖಲಿಸಿದ್ದರು. ಹೋರಾಟಗಾರರ ವೇದಿಕೆಯು ಸ್ವಪ್ರೇರಣೆ ಮೇರೆಗೆ ಅರಣ್ಯವಾಸಿಗಳ ಪರವಾಗಿ ಈ ಪ್ರಕರಣದಲ್ಲಿ ಅವಶ್ಯ ಎದುರುದಾರನಾಗಿ 2019ರ ಸೆಪ್ಟೆಂಬರ್‌ನಲ್ಲಿ ಸೇರ್ಪಡೆಗೊಂಡಿದೆ. ಪಾರಂಪರಿಕ ಅರಣ್ಯವಾಸಿಗಳು ಮೂರು ತಲೆಮಾರಿನ ವೈಯಕ್ತಿಕ ದಾಖಲೆಗಳನ್ನು ಪೂರೈಸಬೇಕು ಎಂಬುದನ್ನು ಕಾನೂನಿಗೆ ವ್ಯತಿರಿಕ್ತವಾಗಿ ಅರ್ಥೈಸಲಾಗುತ್ತಿದೆ. ರಾಜ್ಯದಲ್ಲಿ ಪಾರಂಪರಿಕ ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಹಕ್ಕಿನಿಂದ ವಂಚಿತರಾಗಿರುವುದರಿಂದ ಸುಪ್ರಿಂ ಕೋರ್ಟ್‌ನಲ್ಲಿ ದಾಖಲೆಗಳ ಕುರಿತು ಸ್ಪಷ್ಟೀಕರಣಕ್ಕೆ ಪರಿಹಾರ ಪಡೆಯಲು ಬಯಸಿದ್ದೇವೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net