

ಶಿಗ್ಗಾಂವಿ: ಸೊಗಸಾಗಿ ಬೆಳೆದು ಫಲ ಕೊಡುವ ಹಂತದಲ್ಲಿರುವ ಬೆಳೆಗಳನ್ನು ಕಾಡುಹಂದಿಗಳು ತಿಂದು ಹಾಳು ಮಾಡುತ್ತಿವೆ. ಹಂದಿಗಳ ಕಾಟಕ್ಕೆ ರೈತರು ಆರ್ಥಿಕ ನಷ್ಟು ಅನುಭವಿಸುವಂತಾಗಿದೆ.
ತಾಲೂಕಿನಲ್ಲಿ ಹಲವು ಗ್ರಾಮಗಳಲ್ಲಿ ಬೆಳೆಗಳಿಗೆ ಹಂದಿ ಕಾಟ ಹೆಚ್ಚಾಗಿದೆ. ಮೆಕ್ಕೆಜೋಳದ ಹೊಲಗಳಿಗೆ ಹೆಚ್ಚು ದಾಳಿ ಮಾಡುವ ಕಾಡುಹಂದಿಗಳು ತೆನೆಗಳನ್ನು ತಿನ್ನಲು ಸಾಲು ಸಾಲಾಗಿ ಬೆಳೆಯನ್ನು ನೆಲಕ್ಕೆ ಕೆಡವಿ ಹಾಳು ಮಾಡುತ್ತಿವೆ. ತೀವ್ರ ಮಳೆಯಿಂದಾಗಿ ಸಾಕಷ್ಟು ಬೆಳೆ ಹಾಳಾಗಿದೆ. ಇದರ ಮಧ್ಯೆಯೂ ಅಳಿದುಳಿದ ಅತ್ಯಲ್ಪ ಬೆಳೆ ರಕ್ಷಿಸಿಕೊಳ್ಳಲು ಹಗಲು-ರಾತ್ರಿ ರೈತರು ಕಾಡುಹಂದಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗಳನ್ನು ಕಾಡುಹಂದಿಗಳ ಕಾಟದಿಂದ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ.
ಸಾಕು ಹಂದಿಗಳಿಂದ ದಾಳಿ: ಶಿಗ್ಗಾಂವಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಮೆಕ್ಕೆಜೋಳದ ಹೊಲಗಳಿಗೆ ಸಾಕುಹಂದಿಗಳು ನುಗ್ಗಿ ಬೆಳೆ ಹಾಳು ಮಾಡುತ್ತಿವೆ. ಪಟ್ಟಣ ಪ್ರದೇಶಗಳಲ್ಲಿನ ಹಂದಿಗಳ ಸಾಕಾಣಿಕೆದಾರರು ತಮ್ಮ ಹಂದಿಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ತಂದು ಬಿಟ್ಟಿದ್ದಾರೆ. ಗ್ರಾಮಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಬೆಳೆದ ಮೆಕ್ಕೆಜೋಳ, ಶೇಂಗಾ, ಸೋಯಾಬೀನ್, ಹೆಸರು ಸೇರಿದಂತೆ ವಿವಿಧ ಬೆಳೆಯನ್ನು ಸಾಕುಹಂದಿಗಳು ಹಾಳು ಮಾಡುತ್ತಿವೆ. ಬೆಳೆ ತಿನ್ನುವುದಕ್ಕಿಂತ ತುಳಿದು, ಮುರಿದು ಹಾಳು ಮಾಡುವುದೇ ಹೆಚ್ಚಾಗಿದೆ. ಕಾಡುಹಂದಿಗಳ ಕಾಟದ ಜತೆಗೆ ಸಾಕಿದ ಹಂದಿಗಳ ಕಾಟವು ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಹಂದಿಗಳು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಬೆಳೆಗಳನ್ನು ನಾಶಪಡಿಸುವುದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕುತ್ತಿದ್ದೇವೆ.ಸರ್ಕಾರ, ಅರಣ್ಯ ಇಲಾಖೆ ಅಧಿಕಾರಿಗಳು ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.
ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಹಂದಿಗಳು ಹಾಳು ಮಾಡುತ್ತಿವೆ. ಸ್ಥಳೀಯ ಆಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಕಷ್ಟಕ್ಕೆ ಸ್ಪಂದಿಸಬೇಕಾಗಿದೆ. ಸಾಕಾಣಿಕೆದಾರರ ಬೇಜವಾಬ್ದಾರಿತನದಿಂದ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಸಾಕಾಣೆದಾರರು ತಮ್ಮ ಹಂದಿಗಳನ್ನು ಹಿಡಿದುಕೊಂಡು ಹೋಗಬೇಕು. | ಚಂದ್ರು ಹಾದಿಮನಿ, ಶಿಗ್ಗಾಂವಿ ರೈತ ರೈತರ ಜಮೀನಿನಲ್ಲಿ ಹಂದಿಗಳ ಹಾವಳಿ ಗಮನಕ್ಕೆ ಬಂದಿದೆ. ಸಾಕಾಣೆದಾರರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಸ್ವಯಂ ಪ್ರೇರಣೆಯಿಂದ ಹಿಡಿಯದಿದ್ದರೆ, ಬೇರೆಯವರ ಮೂಲಕ ಹಂದಿಗಳ ನಿಯಂತ್ರಣ ಮಾಡಲಾಗುವುದು. | ಮಲ್ಲೇಶ ಆರ್., ಪುರಸಭೆ ಮುಖ್ಯಾಧಿಕಾರಿ ಶಿಗ್ಗಾಂವಿ