

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರಕ್ಕೆ ಹಂದಿಗಳ ಮಾರಣ ಹೋಮ ನಡೆದಿದ್ದು, ಅಕ್ಕಪಕ್ಕದ ಹಂದಿ ಸಾಕಣಿಕೆ ಮಾಡುತ್ತಿದ್ದವರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ಹೌದು… ಮಡಿಕೇರಿಯಲ್ಲಿ ಈಗ ಆಫ್ರಿಕನ್ ಹಂದಿಜ್ವರದ ಟೆನ್ಷನ್ ಶುರುವಾಗಿದೆ. ಕಳೆದ ೨ ತಿಂಗಳ ಅವಧಿಯಲ್ಲೇ ಇಲ್ಲಿನ ಗಾಳಿಬೀಡು ಗ್ರಾಮದ ಪ್ರಶಾಂತ್ ಮತ್ತು ಗಣಪತಿ ಎಂಬವರ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ೨೦ಕ್ಕೂ ಹೆಚ್ಚು ಹಂದಿಗಳು ಈ ಮಾರಕ ರೋಗಕ್ಕೆ ಬಲಿಯಾಗಿವೆ. ಇದರಿಂದ ಹಂದಿ ಸಾಗಾಣಿಕೆ ಕೇಂದ್ರಗಳು, ಸುತ್ತಮತ್ತಲ ರೈತರಲ್ಲಿ ಆತಂಕ ಎದುರಾಗಿದೆ.
ಮೊದಲಿಗೆ ಹಂದಿಗಳ ಸರಣಿ ಸಾವು ಕಂಡ ಪಶು ವೈದ್ಯಕೀಯ ಇಲಾಖೆ ಅವುಗಳ ಸ್ಯಾಂಪಲ್ ಸಂಗ್ರಹಿಸಿ ಹೈದರಾಬಾದಿಗೆ ಕಳುಹಿಸಿತ್ತು. ಬಳಿಕ ಹೈದರಾಬಾದ್ ಲ್ಯಾಬಿನಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಸಾವನ್ನಪ್ಪಿದ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ. ಆದರೆ, ಲ್ಯಾಬ್ ರಿಪೋರ್ಟ್ ಬರುವಷ್ಟರಲ್ಲಿ ಗಣಪತಿ ಅವರ ಎಲ್ಲಾ ೨೧ ಹಂದಿಗಳು ಮೃತಪಟ್ಟಿದ್ದವು. ಪ್ರಶಾಂತ್‌ರವರು ತಮ್ಮ ಹಂದಿಗಳಿಗೆ ವ್ಯಾಕ್ಸಿನ್ ಕೊಡಿಸಿದ್ದರೂ ೯ಕ್ಕೂ ಹೆಚ್ಚು ಹಂದಿಗಳು ಮೃತಪಟ್ಟಿವೆ.
ಈ ಗ್ರಾಮದಲ್ಲಿ ಐದಾರು ವರ್ಷಗಳಲ್ಲಿ ಹಂದಿ ಸಾಕಾಣಿಕೆ ಮಾಡುತ್ತಿದ್ದ ರೈತರು ಮಾರಾಟಕ್ಕೆ ಸಿದ್ಧವಾಗಿದ್ದ ಹಂದಿಗಳ ಸಾವಿನಿಂದ ಕಂಗಾಲಾಗಿದ್ದಾರೆ. ಅತ್ತ ಆಫ್ರಿಕನ್ ಹಂದಿ ಜ್ವರ ಪತ್ತೆಯಾದ ಹಿನ್ನೆಲೆ ಮತ್ತಷ್ಟು ರೋಗ ಹರಡದಂತೆ ತಡೆಯಲು ಕೊಡಗು ಜಿಲ್ಲಾಡಳಿತ ಮುಂದಾಗಿದೆ.
ಹಂದಿ ಸಾಕಾಣಿಕ ಕೇಂದ್ರದ ೧ ಕಿ.ಮೀ ವ್ಯಾಪ್ತಿಯನ್ನು ರೋಗ ಪೀಡಿತ ವಲಯವೆಂದು ಮತ್ತು ೧೦ ಕಿ.ಮೀ ವ್ಯಾಪ್ತಿಯನ್ನು ಜಾಗೃತ ವಲಯವೆಂದು ಘೋಷಿಸಲಾಗಿದೆ. ಸೋಂಕಿಗೆ ತುತ್ತಾಗಿರುವ ಹಂದಿಗಳನ್ನು ವಧೆ ಮಾಡಿ ವೈಜ್ಞಾನಿಕ ರೂಪದಲ್ಲಿ ಸಂಸ್ಕಾರ ಮಾಡಬೇಕೆಂದು ಆದೇಶಿಸಲಾಗಿದೆ. ರೋಗ ಪೀಡಿತ ಹಂದಿ ಫಾರಂನಿಂದ ೧೦ ಕಿ.ಮೀ. ಒಳಗಿನ ಎಲ್ಲಾ ಹಂದಿ ಸಾಕಾಣೆದಾರರು ಹೊಸದಾಗಿ ಹಂದಿಗಳನ್ನು ಬೇರೆ ಕಡೆಯಿಂದ ಕೊಂಡು ತರಬಾರದು. ಹಂದಿಗಳ ಮತ್ತು ಹಂದಿ ಸಾಕಾಣಿಕೆ ಕೇಂದ್ರಗಳಲ್ಲಿನ ಕೆಲಸಗಾರರ ಸಂಚಾರ ನಿಯಂತ್ರಿಸಬೇಕು. ಹಂದಿಗಳಿಗೆ ಹೋಟೆಲ್ ಹಾಸ್ಟೆಲ್‌ಗಳಲ್ಲಿನ ಮಿಕ್ಕಿದ ಆಹಾರ ಸಂಗ್ರಹಿಸಿ ತಿನ್ನಿಸುವವರು ಕಡ್ಡಾಯವಾಗಿ ಅಂತಹ ಆಹಾರ ಪದಾರ್ಥವನ್ನು ಕನಿಷ್ಟ ೨೦ ನಿಮಿಷಗಳ ಕಾಲ ಬೇಯಿಸಿ ಕೊಡಬೇಕೆಂದು ಸೂಚಿಸಲಾಗಿದೆ.
ಹಂದಿ ಮಾಂಸದ ಹೋಟೆಲ್ ಮತ್ತು ಹಂದಿ ಮಾಂಸ ಮಾರಾಟ ಮಾಡುವ ಅಂಗಡಿಯಲ್ಲಿನ ಉಳಿಕೆ ಪದಾರ್ಥಗಳನ್ನು ಯಾವುದೇ ಕಾರಣಕ್ಕೂ ಹಂದಿಗಳಿಗೆ ನೀಡಬಾರದು. ಸಂದರ್ಶಕರಿಗೆ ಹಂದಿ ಫಾರಂ ಒಳಗೆ ಪ್ರವೇಶಕ್ಕೆ ಅವಕಾಶ ನೀಡಬಾರದು. ಹಂದಿ ಆಹಾರ, ಇತರೆ ಸಾಮಗ್ರಿಗಳನ್ನು ಫಾರಂಗೆ ಸಾಗಿಸುವ ವಾಹನಗಳನ್ನು ಸೋಂಕು ನಿವಾರಕ ದ್ರಾವಣದಿಂದ ಶುಚಿಗೊಳಿಸಬೇಕು. ಹಂದಿ ಫಾರಂನ ಕೆಲಸಗಾರರು ಬೇರೆ ಫಾರಂಗೆ ಹೋಗಬಾರದೆಂದು ಸ್ಪಷ್ಟ ನಿರ್ದೇಶನವನ್ನು ನೀಡಲಾಗಿದೆ.
ಮೊದಲೇ ಅಕಾಲಿಕ ಮಳೆಯಿಂದ ಕಾಫಿ, ಕರಿಮೆಣಸು ಬೆಳೆ ಕಳೆದುಕೊಂಡು ಸಮಸ್ಯೆಗೆ ಸಿಲುಕಿದ್ದ ಕೊಡಗಿನ ರೈತರು, ಇದೀಗ ಆಫ್ರೀಕನ್ ಹಂದಿ ಜ್ವರದಿಂದ ಆತಂಕ ಪಡುವಂತಾಗಿದೆ.
ರೋಗದ ಲಕ್ಷಣ
ಹಂದಿಗಳ ಮೂಗು ಹಾಗೂ ಕಣ್ಣಿನಲ್ಲಿ ಕೀವು ಬರುವುದು ಕಂಡುಬಂದರೆ ಅದು ಆಫ್ರಿಕನ್ ಹಂದಿ ಜ್ವರ ಲಕ್ಷಣವಾಗಿದೆ. ಈ ಸಂದರ್ಭದಲ್ಲಿ ಹಂದಿಗಳು ಒದ್ದಾಡಿ ದಿಢೀರ್ ಸಾಯುತ್ತವೆ. ಕಿವಿ, ಬಾಲ, ಹೊಟ್ಟೆಯ ಕೆಲಭಾಗದಲ್ಲಿ ಕೆಂಪಾಗುವುದು, ಉಸಿರಾಟದ ತೊಂದರೆ, ತೀವ್ರ ಜ್ವರ ಆಫ್ರಿಕನ್ ಹಂದಿ ಜ್ವರದ ಲಕ್ಷಣ ಎಂದು ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಪಿ.ಸುರೇಶ್ ಭಟ್ ಮಾಹಿತಿ ನೀಡಿದ್ದಾರೆ.
ಮನುಷ್ಯನಿಗೆ ಹರಡುವುದಿಲ್ಲ
ಆಫ್ರಿಕನ್ ಹಂದಿ ಜ್ವರವು ಹಂದಿ ಅಥವಾ ಹಂದಿಮಾಂಸದ ಸೇವನೆಯ ಮೂಲಕ ಮನುಷ್ಯನಿಗೆ ಹರಡುವುದಿಲ್ಲ. ಮಾನವರಲ್ಲಿ ಈ ವೈರಾಣು ಯಾವುದೇ ರೋಗವನ್ನುಂಟು ಮಾಡುವುದಿಲ್ಲ. ಆ ನಿಟ್ಟಿನಲ್ಲಿ ಹಂದಿಪಾಲಕರು ಭಯಭೀತರಾಗುವ ಅವಶ್ಯಕತೆ ಇಲ್ಲ. ಹಂದಿಪಾಲಕರು ಮುಂಜಾಗ್ರತೆಯಾಗಿ ಜೈವಿಕ ಸುರಕ್ಷತೆಯ ಕ್ರಮಗಳನ್ನು ಅನುಸರಿಸಬೇಕಷ್ಟೆ ಎಂದು ಡಾ.ಪಿ.ಸುರೇಶ್ ಭಟ್ ಹೇಳುತ್ತಾರೆ.
ಆಫ್ರಿಕನ್ ಹಂದಿ ಜ್ವರ ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ನಿಗಾವಹಿಸಿ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಸಹಕಾರ ನೀಡಿ ಆಫ್ರಿಕನ್ ಹಂದಿ ಜ್ವರದ ಹತೋಟಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.-ಬಿ.ಸಿ.ಸತೀಶ್, ಕೊಡಗು ಜಿಲ್ಲಾಧಿಕಾರಿಆಫ್ರಿಕನ್ ಹಂದಿ ಜ್ವರದ ಬಗ್ಗೆ ರೈತರು ಆತಂಕಪಡುವ ಅಗತ್ಯವಿಲ್ಲ. ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ. ಆ ಫಾರಂನಲ್ಲಿದ್ದ ಎಲ್ಲಾ ಹಂದಿಗಳು ಮೃತಪಟ್ಟಿವೆ. ಸ್ಯಾಂಪಲ್ ಕಳುಹಿಸಿದಾಗ ಆಫ್ರಿಕನ್ ಹಂದಿ ಜ್ವರ ಇರುವುದು ಪತ್ತೆಯಾಗಿತ್ತು. ಹಂದಿ ಜ್ವರ ಹರಡುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳಲಾಗಿದೆ.-ಡಾ.ಪಿ.ಸುರೇಶ್ ಭಟ್, ಉಪ ನಿರ್ದೇಶಕರು, ಪಶುಪಾಲನಾ ಇಲಾಖೆ