ಹಂದಿಗಳ ಸ್ಥಳಾಂತರಕ್ಕೆ ಕೃಷ್ಣಗಿರಿ ಕಾಲನಿ ನಿವಾಸಿಗಳ ಒತ್ತಾಯ

190320 Kushtagi Pepole Appeal for Shift Pigs
Published on

ಕುಷ್ಟಗಿ: ಕೃಷ್ಣಗಿರಿ ಕಾಲನಿಯಲ್ಲಿ ಹಂದಿಗಳಿಂದ ಮಲಿನತೆ ಹೆಚ್ಚುತ್ತಿದ್ದು, ಜನವಸತಿ ಪ್ರದೇಶದಿಂದ ಅವುಗಳನ್ನು ಸ್ಥಳಾಂತರಿಸುವಂತೆ ಒತ್ತಾಯಿಸಿರುವ ನಿವಾಸಿಗಳು ಸ್ಥಳಾಂತರಿಸದಿದ್ದಲ್ಲಿ ಪುರಸಭೆ ಎದುರು ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದಾರೆ.

ಕಾಲನಿಯಲ್ಲಿ ನೂರಾರು ಹಂದಿಗಳಿವೆ. ಹಂದಿ ಸಾಕಣೆ ಮಾಡುವವರು ಪಟ್ಟಣದ ವಿವಿಧ ಹೊಟೆಲ್, ಡಾಬಾಗಳಲ್ಲಿ ಉಳಿದ ಅನ್ನ, ಸಾಂಬರ್ ಇನ್ನಿತರ ವ್ಯರ್ಥ ಆಹಾರ ಪದಾರ್ಥ ಹಾಗೂ ತ್ಯಾಜ್ಯವನ್ನೆಲ್ಲ ತಂದು ಹಂದಿಗಳಿಗೆ ಹಾಕುತ್ತಿದ್ದಾರೆ. ಇದರಿಂದ ದುರ್ವಾಸನೆ, ನೊಣಗಳ ಹಾವಳಿ ಹೆಚ್ಚುತ್ತಿದೆ. ಕೆಲವೊಮ್ಮೆ ಹಂದಿಗಳು ಮನೆಯ ಒಳಗೂ ಪ್ರವೇಶಿಸುತ್ತಿವೆ. ಆರೋಗ್ಯದ ಹಿತದೃಷ್ಟಿಯಿಂದ ಹಂದಿಗಳನ್ನು ಬೇರೆಡೆ ಸ್ಥಳಾಂತರಿಸಬೇಕಿದೆ. ಕಾಲನಿಗೆ ಭೇಟಿ ನೀಡಿದ ವೇಳೆ ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ್ ಹಾಗೂ ನೈರ್ಮಲ್ಯ ನಿರೀಕ್ಷಕ ಮಹೇಶ ಅಂಗಡಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಕಾಲನಿಯ ಶೇಖರಯ್ಯ ಶಂಕಿನ್ ಇತರರು ದೂರಿದ್ದಾರೆ.

ಸ್ವಚ್ಚತೆ ಕಾಪಾಡಲು ಮನವಿ
ಕುಷ್ಟಗಿಯ ವಿವಿಧ ವಾರ್ಡ್‌ಗಳಲ್ಲಿ ಸ್ವಚ್ಚತೆ ಕಾಪಾಡುವಂತೆ ಮಹಿಳಾ ಸಬಲೀಕರಣ ಜಾಗೃತಿ ಸಮಿತಿಯ ಅಧ್ಯಕ್ಷೆ ಶಾರದಾ ಕಟ್ಟಿಮನಿ ಪುರಸಭೆ ಮುಖ್ಯಾಧಿಕಾರಿ ಅಶೋಕ ಪಾಟೀಲ್‌ಗೆ ಗುರುವಾರ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಪಟ್ಟಣದಲ್ಲಿ ಕಸದ ಸಮಸ್ಯೆ ಹೆಚ್ಚುತ್ತಿದೆ. ಬೀದಿ ಬದಿ ಹೊಟೆಲ್‌ಗಳಲ್ಲಿ ಆಹಾರ ಪದಾರ್ಥಗಳನ್ನು ತೆರೆದೇ ಇಡುವುದರಿಂದ ಪದಾರ್ಥದ ಮೇಲೆ ಧೂಳು ಹರಡುತ್ತಿದೆ. ಶುದ್ಧ ಕುಡಿವ ನೀರಿನ ವ್ಯವಸ್ಥೆಯನ್ನೂ ಮಾಡಿರುವುದಿಲ್ಲ. ಬೀದಿಬದಿ ತರಕಾರಿ ವ್ಯಾಪಾರಿಗಳು ತ್ಯಾಜ್ಯವನ್ನೆಲ್ಲ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವುದರ ಜತೆಗೆ ಬೀದಿ ಬದಿ ವ್ಯಾಪಾರಿಗಳಿಗೆ ತಿಳಿವಳಿಕೆ ಮೂಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net