ಎಂಪ್ರೆಸ್ ಪಬ್ಲಿಕ್ ಶಾಲೆ ಗೋಡೆ ಮೇಲೆ ಚಿತ್ರಗಳ ಚಮತ್ಕಾರ ; ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ಶಿಕ್ಷಕರ ಒಲವು

DSC_7926
Published on

ತುಮಕೂರು:ನಗರದ ಸರ್ಕಾರಿ ಎಂಪ್ರೆಸ್ ಪಬ್ಲಿಕ್ ಶಾಲೆ ಗೋಡೆಗಳಿಗೆ ಮೆರುಗು ಬಂದಿದೆ. ಕಲಾವಿದರ ಕುಂಚದಲ್ಲಿ ಅರಳಿರುವ ಚಿತ್ರಗಳು ಶಾಲೆಯ ಗೋಡೆ ಮೇಲೆ ಮೂಡಿದ್ದು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ.

ನೇರಳೇಕೆರೆ ಸರ್ಕಾರಿ ಶಾಲೆ ಚಿತ್ರಕಲಾ ಶಿಕ್ಷಕ ಕೆ.ಎಂ.ರವೀಶ್, ಚೇಳೂರಿನ ರಂಗಸ್ವಾಮಯ್ಯ, ಹೆಬ್ಬೂರಿನ ಇಂದ್ರಕುಮಾರ್, ಕೊಂಡ್ಲಿಯ ಆನಂದ್, ಶೇಷೇನಹಳ್ಳಿ ವೇಣುಗೋಪಾಲ್, ತುಮಕೂರಿನ ಹೀನಾ ಕೌಸರ್ ಕೈಚಳಕದಲ್ಲಿ ಚಿತ್ರಗಳು ಮೂಡಿವೆ.

ಒಂದೇ ನೋಟಕ್ಕೆ ಎಂಥವರನ್ನೂ ಸೆಳೆಯುವ ಚಿತ್ರಕಲೆ ಕಲಿಕೆಯಲ್ಲಿ ಮಕ್ಕಳ ಆಸಕ್ತಿ ಹೆಚ್ಚಿಸಲು ಪೂರಕವಾಗಿದ್ದು ಅದರಲ್ಲೂ ಸುಂದರ ಚಿತ್ರಗಳು ಕಣ್ಮನ ಸೆಳೆಯುತ್ತಿವೆ. ಗೋಡೆ ಮೇಲೆ ಹಾಗೂ ಶಾಲಾ ಕೊಠಡಿ ಒಳಗೆ ಅರಳಿರುವ ಚಿತ್ರಗಳನ್ನು ನೋಡಿದರೆ ಸಾಕು ಎಂಥವರಿಗೂ ಆಸಕ್ತಿ ಮೂಡಿಸುತ್ತಿದೆ. ಇಲ್ಲಿನ ಯುಕೆಜಿ, ಎಲ್‌ಕೆಜಿ ಮಕ್ಕಳಿಗಾಗಿ ಬಣ್ಣದ ಲೋಕವನ್ನೇ ಸೃಷ್ಟಿಸಲಾಗಿದೆ. ಮಕ್ಕಳಿಗೆ ಇಷ್ಟವಾಗುವ ರೀತಿಯ ಚಿತ್ರಗಳನ್ನೇ ಬರೆಯಲಾಗಿದೆ.

ಮಕ್ಕಳ ಕಲಿಕೆಗೆ ಅನುಕೂಲವಾಗಲು ಸ್ಲೇಟ್‌ಗಳ ಮಾದರಿ ಚಿತ್ರ ಬರೆಯಲಾಗಿದ್ದು, ಅಲ್ಲಿಯೇ ಎಲ್‌ಕೆಜಿ, ಯುಕೆಜಿ ಮಕ್ಕಳಿಗೆ ಬರೆಯುವ ವ್ಯವಸ್ಥೆ ಕಲ್ಪಿಸಲಾಗಿದೆ. ಕರೊನಾ ಕಾರಣದಿಂದ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಶಾಲೆ ಆರಂಭವಾಗಿಲ್ಲ, ಇದರ ನಡುವೆ ಚಿತ್ರಕಲಾ ಶಿಕ್ಷಕರು ಮುಂದೆ ಶಾಲೆ ಆರಂಭವಾಗುವ ವೇಳೆಗೆ ಉತ್ತಮ ಚಿತ್ರ ಬರೆದರೆ ಮಕ್ಕಳಿಗೆ ಅನುಕೂಲವಾಗಲಿದೆ ಎಂಬುದು ಕಲಾವಿದ ಶಿಕ್ಷಕರ ಉದ್ದೇಶ. ಚಿತ್ರಕಲಾ ಶಿಕ್ಷಕರ ಕಾರ್ಯಕ್ಕೆ ಪ್ರಾಚಾರ್ಯ ಕೆ.ಎಸ್.ಸಿದ್ದಲಿಂಗಪ್ಪ, ಉಪ ಪ್ರಾಂಶುಪಾಲ ಎಸ್.ಕೃಷ್ಣಪ್ಪ ಹಾಗೂ ಶಿಕ್ಷಣ ಇಲಾಖೆ ಸಹಕಾರ ನೀಡಿದೆ. ಒಟ್ಟಾರೆ ತುಮಕೂರು ಜಿಲ್ಲಾ ಚಿತ್ರಕಲಾ ಸಂಘ ಹಾಗೂ ಚಿತ್ರಕಲಾ ಶಿಕ್ಷಕರ ತಂಡ ಇಡೀ ಶಾಲೆಯಲ್ಲಿ 50ಕ್ಕೂ ಹೆಚ್ಚು ಮಕ್ಕಳಿಗೆ ಮುದ್ದು ಎನಿಸುವ ಚಿತ್ರಗಳನ್ನು ಬರೆದಿದೆ.

ಗೋಡೆ ಮೇಲೆ ಹಾರುವ ಚಿಟ್ಟೆಗಳು:ಚಿತ್ರಕಲಾ ಶಿಕ್ಷಕರ ತಂಡ ಇಲ್ಲಿನ ಶಾಲೆ ಗೋಡೆಗಳ ಮೇಲೆ ವಿಶೇಷ ಚಿತ್ರಗಳನ್ನು ಬರೆದಿದ್ದಾರೆ. ಇದು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿವೆ. ಗಣಿತದ ಆಯಾಮ ರಚನೆ, ಹಣ್ಣು, ತರಕಾರಿ ರಾರಾಜಿಸುತ್ತಿವೆ. ಪ್ರಾಣಿ ಪಕ್ಷಿಗಳು ಹಾರುತ್ತಿವೆಯೇನೋ ಎಂಬಂತೆ ಬಾಸವಾಗುವ ಚಿತ್ರಗಳು, ಓಡುತ್ತಿರುವ ರೈಲು, ಸೂರ್ಯನ ಉದಯ, ಪ್ರಕೃತಿ ಸೌಂದರ್ಯ, ಶಾಲಾ ಮೈದಾನ, ಹಾರುವ ಚಿಟ್ಟೆಗಳು, ಮಿಕ್ಕಿ ಮೌಸ್, ಛೋಟಾ ಭೀಮ್ ಸೇರಿ ವಿವಿಧ ಚಿತ್ರಗಳು ಶಾಲಾ ಗೋಡೆಗಳ ಮೇಲೆ ಅರಳಿ ನಿಂತಿವೆ.

ಮಕ್ಕಳ ಕಲಿಕೆಗೆ ಆಸಕ್ತಿ ಹುಟ್ಟಿಸಲು ಶಾಲೆಯ ಕೊಠಡಿ ಆಕರ್ಷಣೀಯವಾಗಿಡಲು ಚಿತ್ರಕಲೆ ಸಹಾಯಕವಾಗಿದ್ದು, ಸರ್ಕಾರಿ ಶಾಲೆಯ ಗೋಡೆಗಳ ಮೇಲೆ ಚಿತ್ರ ಬರೆಯಲು ನಮಗೂ ಖುಷಿಯಾಗಿದೆ. ಚಿತ್ರದ ಮೂಲಕ ಮಕ್ಕಳಿಕೆ ಕಲಿಕೆ ಸುಲಭವಾಗಿಸಲು ಶಿಕ್ಷಕರಿಗೂ ಸಹಾಯಕವಾಗಿದೆ. ಖಾಸಗಿ ಶಾಲೆಗಿಂತ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯಲ್ಲಿಯೇ ಸಿಗುತ್ತಿದೆ. ನರ್ಸರಿ ಮಕ್ಕಳಿಗೆ ನಮ್ಮ ಶಾಲೆ ಆಕರ್ಷಣೀಯವಾಗಿದೆ. ಕೆ.ಎಂ.ರವೀಶ್ ಚಿತ್ರಕಲಾ ಶಿಕ್ಷಕ, ನೇರಳೆಕೆರೆ ಸರ್ಕಾರಿ ಶಾಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net