

ಕೋಟ: ಕೋಟದ ಮಣೂರು ರಾಷ್ಟ್ರೀಯ ಹೆದ್ದಾರಿ 66ರ ರಾಜಲಕ್ಷ್ಮೀ ಸಭಾಭವನದ ಎದುರುಗಡೆ ಸೋಮವಾರ ಬೆಳಗ್ಗೆ ಹಣ್ಣು ಸಾಗಾಟ ಮಾಡುತ್ತಿದ್ದ ಪಿಕಪ್ ವಾಹನ ಪಲ್ಟಿಯಾಗಿ ಚಾಲಕ ಮಹಾರಾಷ್ಟ್ರ ಸಾಂಗ್ಲಿಯ ದಿನೇಶ್ ಚಂದ್ರಶೇಖರ ಮುಂಚಾಂಡಿ (20) ಮೃತಪಟ್ಟಿದ್ದಾರೆ.
ವಿಜಯಪುರದಿಂದ ಮಂಗಳೂರು ಕಲ್ಲಾಪು ಎಪಿಎಂಸಿ ಮಾರುಕಟ್ಟೆಗೆ ಹಣ್ಣು ಸಾಗಾಟ ಮಾಡಲಾಗುತ್ತಿತ್ತು. ಸಭಾಭವನದ ಎದುರುಗಡೆ ನಿಯಂತ್ರಣ ತಪ್ಪಿ, ವಾಹನ ರಸ್ತೆಯ ಬದಿಯಲ್ಲಿರುವ ಕಬ್ಬಿಣದ ಬೇಲಿಗೆ ಡಿಕ್ಕಿ ಹೊಡೆದು ಚಂದ್ರಶೇಖರ ರಸ್ತೆಗೆ ಬಿದ್ದಿದ್ದು, ಅವರ ಮೇಲೆಯೇ ವಾಹನ ಪಲ್ಟಿಯಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ ಘಟನಾ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ಕ್ರೇನ್ ಮೂಲಕ ವಾಹನವನ್ನು ಎತ್ತಿ ಮೃತದೇಹವನ್ನು ಬ್ರಹ್ಮಾವರ ಶವಾಗಾರಕ್ಕೆ ಸಾಗಿಸಲಾಯಿತು. ಭಾನುವಾರ ಇದೇ ಪರಿಸರದ ಸಮೀಪ ಕೆಮಿಕಲ್ ಗ್ಯಾಸ್ ಹೊತ್ತೊಯುತ್ತಿದ್ದ ಟ್ಯಾಂಕರ್ ಪಲ್ಪಿಯಾಗಿತ್ತು. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.