

ಸೋಮವಾರಪೇಟೆ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಪಿಕಾರ್ಡ್) ವತಿಯಿಂದ ರೈತ ಸಭಾ ಭವನ ನಿರ್ಮಾಣಕ್ಕೆ ಅಗತ್ಯ ನೆರವು ಒದಗಿಸಲಾಗುವುದು ಎಂದು ಕಾಸ್ಕಾರ್ಡ್‌ನ ಕೊಡಗು ಹಾಗೂ ಹಾಸನ ಜಿಲ್ಲಾ ನಿರ್ದೇಶಕ ಮತ್ತು ಅರಕಲಗೂಡು ಕ್ಷೇತ್ರದ ಶಾಸಕ ಎ. ಮಂಜು ಭರವಸೆ ನೀಡಿದರು.
ಪಟ್ಟಣದ ಪಿಕಾರ್ಡ್ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಮಾಸಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ಬ್ಯಾಂಕ್ ಉತ್ತಮ ಕಟ್ಟಡ ಹೊಂದಿದ್ದು, ರೈತರಿಗೆ ಇನ್ನಷ್ಟು ನೆರವು ಒದಗಿಸಬೇಕಿದೆ. ಬ್ಯಾಂಕ್ ಮೂಲಕ ರೈತ ಸಭಾ ಭವನ ನಿರ್ಮಾಣ ಮಾಡಲು ಅನುದಾನ ಒದಗಿಸಲಾಗುವುದು. ಬ್ಯಾಂಕ್ ಮೂಲಕ ಸ್ಥಳೀಯ ರೈತರಿಗೆ ಶೇ. 3ರ ಬಡ್ಡಿ ದರದಲ್ಲಿ ದೀರ್ಘಾವಧಿ ಸಾಲ ವಿತರಿಸಲು ಕ್ರಮ ವಹಿಸಲಾಗುವುದು. ಇದಕ್ಕೆ ಕೇಂದ್ರ ಬ್ಯಾಂಕ್‌ನಿಂದ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ ಬಿ.ಬಿ. ಸತೀಶ್ ಮಾತನಾಡಿ, ಸದಸ್ಯರ ಶ್ರೇಯೋಭಿವೃದ್ಧಿಗೆ ಬ್ಯಾಂಕ್ ಬದ್ಧವಾಗಿದೆ. ವಿವಿಧ ಮಾದರಿಯ ಸಾಲ ವಿತರಣೆ ಮಾಡಲಾಗುತ್ತಿದೆ. ಸದಸ್ಯರಿಗೆ ಯಶಸ್ವಿನಿ ಯೋಜನೆಯ ಉಪಯೋಗ ಒದಗಿಸಲಾಗುತ್ತಿದೆ. ಸರ್ವ ನಿರ್ದೇಶಕರ ಸಹಕಾರದಿಂದ ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದರು.