ಪ್ರಾಥಮಿಕ ಹಂತದಲ್ಲಿಯೇ ಬೆಳೆಯಲಿ ಸಣ್ಣ ಕಥೆ ಬರೆಯುವ ಹವ್ಯಾಸ

SMALL STORY's
ಕುಕನೂರು ತಾಲೂಕಿನ ಭಾನಾಪುರದಲ್ಲಿ ಹಮ್ಮಿಕೊಂಡಿದ್ದ ಮಕ್ಕಳಿಗೆ ಸಣ್ಣ ಕಥೆ ಬರೆಯುವ ಅಭಿಯಾನ ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಮಾಜಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಯಲ್ಲಪ್ಪ ಮೇಟಿ ಪುಸ್ತಕ ಬಹುಮಾನ ವಿತರಿಸಿದರು. ಗ್ರಂಥಾಲಯದ ಮೇಲ್ವಿಚಾರಕ ಹೇಮರಾಜ ಗಡಾದ, ಮುಖ್ಯಶಿಕ್ಷಕ ಲಿಂಗರಡ್ಡೆಪ್ಪ ಕರಮುಡಿ, ಶಿಕ್ಷಕರಾದ ಮಹಾದೇವಿ, ಕಲ್ಪನಾ ಇದ್ದರು.
Published on

ಕುಕನೂರು: ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಸಣ್ಣ ಕಥೆ ಬರೆಯುವ ಹವ್ಯಾಸ ಬೆಳೆಸುವುದು ಸೂಕ್ತ. ಸರ್ಕಾರ ಕೂಡ ಇದಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಯಲ್ಲಪ್ಪ ಮೇಟಿ ಹೇಳಿದರು.

ತಾಲೂಕಿನ ಭಾನಾಪುರ ಗ್ರಾಮದಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಪಂ ಗ್ರಂಥಾಲಯ ಆಶ್ರಯದಲ್ಲಿ ಮಕ್ಕಳಿಗೆ ಸಣ್ಣ ಕಥೆ ಬರೆಯುವ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಮಕ್ಕಳ ಬುದ್ಧಿವಂತಿಕೆ ವಿಕಾಸಕ್ಕೆ ಇಂತಹ ಕಾರ್ಯಕ್ರಮ ಪೂರಕವಾಗಿದ್ದು, ಮಕ್ಕಳಲ್ಲಿ ಇಂತಹ ಹವ್ಯಾಸಗಳನ್ನು ಬೆಳೆಸಬೇಕು. ಬುನಾದಿ ಹಂತದಲ್ಲಿಯೇ ಸಣ್ಣ ಕಥೆ ಬರೆಯುವುದರಿಂದ ಮಕ್ಕಳ ಮಾನಸಿಕ, ದೈಹಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಈ ಹಿಂದೆ ರಾಜ-ಮಹಾರಾಜರ ಆಸ್ಥಾನದಲ್ಲಿ ಬೀರ‌್ಬಲ್, ತೆನಾಲಿರಾಮ ಅಂಥವರು ಸಣ್ಣ ಸಣ್ಣ ಕಥೆ ಹೇಳುವ ಮೂಲಕ ಎಲ್ಲರ ಹೃದಯ ಗೆಲುತ್ತಿದ್ದರು. ಕಥೆ ಕೂಡ ಅರ್ಥಪೂರ್ಣ ಹಾಗೂ ಸಮಾಜಕ್ಕೆ ಸಂದೇಶ ನೀಡಬೇಕು. ಅಂತಹ ಕಥೆಗಳನ್ನು ಬರೆಯುವುದು ಒಂದು ಕಲೆ. ನಿಮ್ಮ ಸುತ್ತ ಇರುವ ಪರಿಸರ, ಪ್ರಾಣಿಯ ವಿಶೇಷತೆಯನ್ನು ಅಕ್ಷರಗಳ ಮೂಲಕ ಕಟ್ಟಿ, ಕಥೆ ರೂಪಕ್ಕೆ ತರಬೇಕೆಂದರು.

ಸರ್ಕಾರ ಗ್ರಾಪಂ ಗ್ರಂಥಾಲಯದ ಮೇಲ್ವಿಚಾರಕರಿಗೆ ತರಬೇತಿ ನೀಡಿ, ಪ್ರಾಥಮಿಕ ಹಂತದ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿಯಿಂದ 7ನೇ ತರಗತಿವರೆಗೆ ಸಣ್ಣ ಕಥೆ ಬರೆಯುವ ಸ್ಪರ್ಧೆ ನಡೆಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.

ನಮ್ಮ ಸುತ್ತ ಇರುವ ಪರಿಸರದ ಬಗ್ಗೆ ಕಥೆ ರಚಿಸುವುದನ್ನು ರೂಢಿಸಿಕೊಳ್ಳಬೇಕು. ಸರ್ಕಾರ ಪ್ರಾಥಮಿಕ ಹಂತದ ಮಕ್ಕಳಿಗೆ ಸಣ್ಣ ಕಥೆ ಬರೆಯುವ ಅಭಿಯಾನ ಹಮ್ಮಿಕೊಂಡಿದ್ದು, ಇದರಿಂದ ಮಕ್ಕಳಲ್ಲಿ ಅಕ್ಷರ ಜ್ಞಾನದ ಜತೆಗೆ ಬುದ್ಧಿವಂತಿಕೆ ಬೆಳೆಯುತ್ತದೆ.ಲಿಂಗರಡ್ಡೆಪ್ಪ ಕರಮುಡಿ, ಮುಖ್ಯಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net