ಈ ಬಾರಿ ಉತ್ಸವದಲ್ಲಿ ಕರ್ಕಶ ಪಿಪೀ ಬ್ಯಾನ್!

pipi
pi pi ban
Published on

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ತಾಲೂಕಿನ ಇತಿಹಾಸ ಪ್ರಸಿದ್ಧ ಅವಿಮುಕ್ತೇಶ್ವರ ಸ್ವಾಮಿ ರಥೋತ್ಸವ ಹಾಗೂ ದ್ರೌಪದಮ್ಮ ದೇವಿ ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೆ ಈ ಬಾರಿ ಉತ್ಸವದಲ್ಲಿ ಕರ್ಕಶ ಧ್ವನಿ ಮಾಡಿ ಕಿರಿಕಿರಿಯುಂಟು ಮಾಡುವ ಪಿಪೀಗಳನ್ನು ಸಂಪೂರ್ಣ ನಿಷೇಧಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಕರಗ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಮಕ್ಕಳು ಆಗಮಿಸುತ್ತಾರೆ. ಈ ವೇಳೆ ಹಲವು ಪುಂಡ ಹುಡುಗರು ಕರ್ಕಶ ಧ್ವನಿ ಮಾಡುವ ಪಿಪೀ ಊದುತ್ತಾ ಎಲ್ಲರಿಗೂ ಕಿರಿಕಿರಿ ಮಾಡುತ್ತಾರೆ. ಇದರಿಂದ ಹಲವು ವೇಳೆ ಮಾತಿನ ಚಕಮಕಿ ನಡೆಯುವುದು, ಕೈಕೈ ಮಿಲಾಯಿಸುವ ಹಂತಕ್ಕೆ ಹೋಗುವ ಪ್ರಕರಣಗಳು ನಡೆಯುತ್ತವೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಡುತ್ತಾರೆ. ದುರಾದೃಷ್ಟವಶಾತ್ ಪ್ರಾಣಹಾನಿಗೂ ಎಡೆಮಾಡಕೊಡಬಹುದು ಎಂಬುದು ಸಾರ್ವಜನಿಕರ ಆತಂಕವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಉತ್ಸವದಲ್ಲಿ ಇಂಥ ಪಿಪೀ ಮಾರಾಟವನ್ನು ಬ್ಯಾನ್ ಮಾಡುವುದು ಒಳಿತು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಬೆಚ್ಚಿ ಬೀಳುತ್ತಾರೆ: ಸಾಮಾನ್ಯವಾಗಿ ಜಾತ್ರಾ ಮಹೋತ್ಸವಗಳಲ್ಲಿ ಇಂಥ ಪಿಪೀಗಳ ಮಾರಾಟ ಹೆಚ್ಚಿರುತ್ತದೆ. ಸಣ್ಣ ಮಕ್ಕಳು ಇದನ್ನು ಕೊಳ್ಳುವುದು ಸಾಮಾನ್ಯ ಆದರೆ ಬೇಕಂತಲೆ ಕೆಲವು ಪುಂಡರು ಇವುಗಳನ್ನು ಖರೀದಿ ಮಾಡಿ ಹೆಣ್ಣು ಮಕ್ಕಳ ಕಿವಿ ಬಳಿ ಬಂದು ದಿಢೀರ್ ಶಬ್ದ ಮಾಡುತ್ತಾರೆ ಇದರಿಂದ ಹೆಣ್ಣು ಮಕ್ಕಳು ಗಾಬರಿಯಾಗುತ್ತಾರೆ. ಉತ್ಸವದ ಸಂತಸ ಸವಿಯಲು ಬರುವ ಹೆಣ್ಣು ಮಕ್ಕಳು ಕಿರಿಕಿರಿ ಅನುಭವಿಸುವಂಥ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬುದು ಸಾರ್ವಜನಿಕ ಆಕ್ರೋಶವಾಗಿದೆ. ಸಣ್ಣ ಮಕ್ಕಳು ಪಿಪೀಯ ಕರ್ಕಶ ಸದ್ದಿಗೆ ಹೆದರಿ ಅಳಲು ಆರಂಭಿಸುತ್ತವೆ ಅವುಗಳನ್ನು ಸುಧಾರಿಸುವಷ್ಟರಲ್ಲೇ ತಾಯಂದಿರು ಸಾಕಾಗಿ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ನಗರಸಭೆ ಹಾಗೂ ಪೊಲೀಸರು ಈ ಬಾರಿ ಕಿರಿಕಿರಿ ಮಾಡುವ ಇಂಥ ಪಿಪೀಗಳನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪೊಲೀಸರ ಸ್ಪಂದನೆ: ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪೀಪಿ ನಿಷೇಧಿಸುವಂತೆ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಒತ್ತಾಯಿಸಿ ಪೋಸ್ಟ್‌ಗಳನ್ನು ಹರಿಬಿಡುತ್ತಿದ್ದಾರೆ. ಎಲ್ಲರೂ ಸಂತಸದಿಂದ ಆಚರಿಸಬೇಕಾದ ಉತ್ಸವದಲ್ಲಿ ಇಂಥ ಕಿರಿಕಿರಿ ತಪ್ಪಿಸಬೇಕು ಎಂದು ವಿನಂತಿಸಿಕೊಳ್ಳುತ್ತಿದ್ದಾರೆ ಈ ಇದನ್ನು ಪೊಲೀಸರು ಗಮನಿಸಿದ್ದು ಈ ಬಾರಿ ಪಿಪೀ ಮಾರಾಟಕ್ಕೆ ಬ್ರೇಕ್ ಹಾಕಲಿದ್ದಾರೆ ಎಂಬ ಮಾತು ಹರಿದಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net