ಕನಕಗಿರಿಯಲ್ಲಿ ಟ್ರಾಫಿಕ್ ಕಿರಿಕಿರಿ ತಪ್ಪಿಸಿ

MANAVI
ಟ್ರಾಫಿಕ್ ಕಿರಿಕಿರಿ ತಪ್ಪಿಸುವಂತೆ ಆಗ್ರಹಿಸಿ ಕನಕಗಿರಿ ಠಾಣೆ ಪಿಐ ಜಗದೀಶ ಕೆ.ಜಿ.ಗೆ ಪಟ್ಟಣದ ಮುಖಂಡರು ಮಂಗಳವಾರ ಮನವಿ ಸಲ್ಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕೆ., ಪ್ರಮುಖರಾದ ವಸಂತ, ದೊಡ್ಡಬಸಪ್ಪ ಭತ್ತದ್, ಪಾಮಣ್ಣ ಅರಳಲಿಗನೂರು ಇತರರಿದ್ದರು.
Published on

ಕನಕಗಿರಿ: ಪಟ್ಟಣದ ಪ್ರಮುಖ ರಸ್ತೆಗಳು ಸೇರಿ ಕನಕಾಚಲ ದೇವಸ್ಥಾನ, ತಹಸಿಲ್ ಕಚೇರಿ ಬಳಿ ಆಗುತ್ತಿರುವ ಟ್ರಾಫಿಕ್ ಕಿರಿಕಿರಿ ತಪ್ಪಿಸಬೇಕೆಂದು ಆಗ್ರಹಿಸಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು ಪಿಐ ಜಗದೀಶ ಕೆ.ಜಿ.ಗೆ ಮಂಗಳವಾರ ಮನವಿ ಸಲ್ಲಿಸಿದರು.

ಪಟ್ಟಣದಲ್ಲಿ ಹಾದು ಹೋಗಿರುವ ಲಿಂಗಸುಗೂರು-ಗಂಗಾವತಿ ರಾಜ್ಯ ಹೆದ್ದಾರಿ, ವಾಲ್ಮೀಕಿ ವೃತ್ತದಿಂದ ನವಲಿ ರಸ್ತೆ, ಬಸ್ ನಿಲ್ದಾಣ ರಸ್ತೆಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗುತ್ತಿದೆ. ಕನಕಾಚಲ ದೇವಸ್ಥಾನ, ತಹಸಿಲ್ ಕಚೇರಿ ಬಳಿ ಟ್ರಾಫಿಕ್ ಕಿರಿಕಿರಿಯಾಗುತ್ತಿದ್ದು, ಇದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರ ಓಡಾಡಕ್ಕೂ ಸಮಸ್ಯೆಯಾಗಿದೆ. ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವುದರಿಂದ ಹಲವು ಅಪಘಾತ ಸಂಭವಿಸಿರುವ ಉದಾಹರಣೆಗಳಿವೆ.

ಅಲ್ಲದೆ, ರೈತರು ಜಾನುವಾರುಗಳಿಗೆ ಟ್ರಾೃಕ್ಟರ್, ಟಾಟಾ ಏಸ್ ವಾಹನಗಳಲ್ಲಿ ಸಾವಿರಾರು ರೂ. ಖರ್ಚು ಮಾಡಿ ಭತ್ತದ ಹುಲ್ಲನ್ನೇರಿಕೊಂಡು ಬರುತ್ತಿದ್ದು, ವಾಲ್ಮೀಕಿ ವೃತ್ತ ದಾಟುವುದೇ ದೊಡ್ಡ ಸಮಸ್ಯೆಯಾಗಿದೆ. ರೈತರು ಜೀವ ಕೈಯಲ್ಲಿಡಿದು ಹುಲ್ಲು ಹೊತ್ತ ವಾಹನಗಳನ್ನು ದಾಟಿಸುತ್ತಿದ್ದಾರೆ. ಈಗಾಗಲೇ ಭತ್ತದ ಹುಲ್ಲಿನ ಗಾಡಿಗಳು ಬಡಿದು ರಸ್ತೆ ಬದಿಯ ಡಿವೈಡರ್‌ಗಳು ನೆಲಕ್ಕುರುಳಿವೆ. ಅಲ್ಲದೆ ವಾಹನ ಡಿವೈಡರ್‌ಗೆ ತಾಗುವುದರಿಂದ ಮೂರ‌್ನಾಲ್ಕು ಹೊರೆಯಷ್ಟು ಹುಲ್ಲು ನೆಲದ ಪಾಲಾಗಿ ರೈತರಿಗೆ ನಷ್ಟವಾಗುತ್ತದೆ. ಆದ್ದರಿಂದ ತಾವರಗೇರಾ ರಸ್ತೆ ಹಾಗೂ ನವಲಿ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಆಗದಂತೆ ಪೊಲೀಸರನ್ನು ನಿಯೋಜಿಸಬೇಕು ಎಂದು ಮುಖಂಡರು ಪಿಐಗೆ ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಗಂಗಾಧರಸ್ವಾಮಿ, ಪ್ರಮುಖರಾದ ವಸಂತ, ದೊಡ್ಡಬಸಪ್ಪ ಭತ್ತದ್, ಪಾಮಣ್ಣ ಅರಳಿಗನೂರು, ನಾಗೇಶ ಬಡಿಗೇರ, ಕೊಟ್ರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net