ಜಾಬಿನ್​ ಕಾಲೇಜಿನಲ್ಲಿ ರಾಷ್ಟ್ರೀಯ ಸಮ್ಮೇಳನ

IMG_20250426_200908_641.jpg
Published on

ಹುಬ್ಬಳ್ಳಿ: ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಭೌತಶಾಸ್ತ್ರ ಕುರಿತಾದ ಸಂಶೋಧನೆಗಳನ್ನು ಕೈಗೊಳ್ಳುವ ಮೂಲಕ ಸಮಾಜಕ್ಕೆ ನೆರವಾಗಬೇಕೆಂದು ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸಡ್ ಸೈಂಟಿಫಿಕ್ ರೀಸರ್ಚ್ (ಜೆಎನ್ ಸಿಎಎಸ್ಆರ್) ಪ್ರಾಧ್ಯಾಪಕ ಮತ್ತು ಡೀನ್ ಪ್ರೊ. ಎನ್.ಎಸ್. ವಿದ್ಯಾಧಿರಾಜ ಹೇಳಿದರು.

ಇಲ್ಲಿಯ ಕೆಎಲ್ಇ ಸಂಸ್ಥೆಯ ಪಿ.ಸಿ. ಜಾಬಿನ ವಿಜ್ಞಾನ ಮಹಾವಿದ್ಯಾಲಯ ಭೌತಶಾಸ್ರ್ರ ವಿಭಾಗವು ಆಯೋಜಿಸಿದ್ದ ನದ್ರವ್ಯ ಭೌತಶಾಸ್ತ್ರ ಮತ್ತು ಅದರ ಅನ್ವಯಿಕೆಗಳು ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.

ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ನಿರಂತರ ಸಂಶೋಧನೆಗಳನ್ನು ಕೈಗೊಳ್ಳ ಬೇಕು. ಅದರಿಂದ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯ ಭೌತಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ವಿ.ಎಂ. ಜಾಲಿ, ಜೆಎನ್ ಸಿಎಎಸ್ಆರ್ ಶಿಕ್ಷಣ ತಂತ್ರಜ್ಞಾನ ಘಟಕದ ಪ್ರೊ. ವಿನಾಯಕ ಪತ್ತಾರ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಬಂಧ ಮಂಡಿಸಿದರು.

42 ಪೋಸ್ಟರ್ ಪ್ರಜಂಟೇಶನ್ ಪ್ರದರ್ಶಿಸಲಾಯಿತು ಮತ್ತು 25ಕ್ಕೂ ಹೆಚ್ಚಿನ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸಲಾಯಿತು. 110ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಿದ್ದರು.

ವಿಭಾಗದ ಮುಖ್ಯಸ್ಥ ಡಾ. ಜಗದೀಶ ಅಂಗಡಿ, ಉಪನ್ಯಾಸಕರಾದ ಮೇಧಾ ದೇಶಪಾಂಡೆ ಮತ್ತು ವಿರೇಶ ಹಿರೇಮಠ, ಲತಾ ಶಿಡಗನಾಳ, ಡಾ. ರಾಜೇಶ ನಾಯರ್ ಮುಂತಾದವರು ಕಾರ್ಯಕ್ರಮ ಸಂಘಟಿಸಿದ್ದರು.

ಪ್ರಾಚಾರ್ಯ ಡಾ. ಸಂಧ್ಯಾ ಕುಲಕರ್ಣಿ ಸ್ವಾಗತಿಸಿದರು. ಶ್ರದ್ಧಾ ಕಲಬುರಗಿ ಕಾರ್ಯಕ್ರಮ ನಿರೂಪಿಸಿದರು. ಸಮ್ಮೇಳನಕ್ಕೆ ಸಂಬಂಧಿಸಿದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net