ಆಟೋಟಗಳಿಂದ ದೈಹಿಕ, ಮಾನಸಿಕವಾಗಿ ಸದೃಢ

07bhr 1
ಬಾಳೆಹೊನ್ನೂರಿನಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಅಂತೋಣಿ ಡಿಮೆಲ್ಲೋ, ವೆಂಕಟೇಶ್ ಭಟ್, ಅನುಷಾ ಡಿಸೋಜಾ, ಅನನ್ಯಾ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಸ್ಟೀಫನ್, ಸತೀಶ್ ಅರಳೀಕೊಪ್ಪ, ಸದಾಶಿವ ಆಚಾರ್ಯ, ರಾಜೇಂದ್ರ, ಮಹಾದೇವಗೌಡ ಇತರರಿದ್ದರು.
Published on

ಬಾಳೆಹೊನ್ನೂರು: ನಿರಂತರವಾಗಿ ಕ್ರೀಡಾಕೂಟಗಳನ್ನು ನಡೆಸುವ ಮೂಲಕ ಆಟಗಾರರನ್ನು ಹೆಚ್ಚಿಸುವ ಕೆಲಸ ನಡೆಯಬೇಕಿದೆ ಎಂದು ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್ ಹೇಳಿದರು.

ಪಟ್ಟಣದ ಕಲಾರಂಗ ಕ್ರೀಡಾಂಗಣದಲ್ಲಿ ಬಾಳೆಹೊನ್ನೂರು ವಾಲಿಬಾಲ್ ಲೀಗ್ ತಂಡದಿಂದ ಶನಿವಾರ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡಾಕೂಟಗಳು ಪೂರಕ. ವಾಲಿಬಾಲ್‌ನಿಂದ ಹಲವು ಪ್ರಯೋಜನಗಳು ನಮಗಿವೆ. ಇಂತಹ ಪಂದ್ಯಾವಳಿಗಳು ನಿರಂತರವಾಗಿ ನಡೆಯಬೇಕಿದೆ. ಬಾಳೆಹೊನ್ನೂರಲ್ಲಿ ಆಟೋಟಗಳಿಗೆ ಉತ್ತಮ ಪ್ರೋತ್ಸಾಹ ದೊರೆಯುತ್ತಿದೆ. ಇಲ್ಲಿನ ಹಲವು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಉತ್ತಮ ಸಾಧನೆ ಮಾಡಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ವೆಂಕಟೇಶ್ ಭಟ್ ಮಾತನಾಡಿ, ಬಾಳೆಹೊನ್ನೂರು ಕ್ರೀಡಾಕೂಟದ ಕಾಶಿಯಾಗಿದ್ದು, ಕ್ರೀಡೆಗಳಿಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಕ್ರೀಡಾಕೂಟಗಳನ್ನು ನಡೆಸಲು ದಾನಿಗಳು ಪ್ರೋತ್ಸಾಹ ನೀಡುತ್ತಿದ್ದು, ಇದರಿಂದಲೇ ಕ್ರೀಡೆಗಳು ಇಲ್ಲಿ ಹೆಚ್ಚು ಬೆಳೆಯುತ್ತಿವೆ. ವರ್ಷವಿಡಿ ಹತ್ತಾರು ವಿವಿಧ ಪಂದ್ಯಾವಳಿಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದರು.
ಜೆಸಿಐ ಮಾಜಿ ಅಧ್ಯಕ್ಷ ಸತೀಶ್ ಅರಳೀಕೊಪ್ಪ ಮಾತನಾಡಿ, ಕ್ರೀಡೆಗೆ ಜಾತಿ, ಮತ, ಧರ್ಮ ಭೇದವಿಲ್ಲ. ಕ್ರೀಡೆಯನ್ನು ಯಾರೂ ಜಾತಿ, ಮತದ ನೆಲೆಗಟ್ಟಿನಲ್ಲಿ ನೋಡುವುದಿಲ್ಲ. ಕೇವಲ ಸ್ನೇಹ ಬಾಂಧವ್ಯದ ಮೂಲಕ ನೋಡುತ್ತಾರೆ. ಕ್ರೀಡೆಯಲ್ಲಿ ಸತತವಾಗಿ ಪಾಲ್ಗೊಳ್ಳುವುದರಿಂದ ಸದೃಢವಾದ ದೇಹ ಕಾಪಾಡಲು ಸಾಧ್ಯವಾಗುವುದಲ್ಲದೇ ದುಶ್ಚಟಗಳಿಂದ ದೂರವಾಗಲು ಸಾಧ್ಯವಿದೆ ಎಂದು ಹೇಳಿದರು.
ಹಿರಿಯ ಕ್ರೀಡಾಪಟು ಅಂತೋಣಿ ಡಿಮೆಲ್ಲೋ, ಸಾಧಕರಾದ ವೆಂಕಟೇಶ್ ಭಟ್, ಅನುಷಾ ಡಿಸೋಜಾ, ಅನನ್ಯಾ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್‌ನ ಅಧ್ಯಕ್ಷ ಡಿ.ರಾಜೇಂದ್ರ, ಬಿ.ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ಕಾಫಿ ಬೆಳೆಗಾರ ಸಿ.ಎಂ.ಮಹಾದೇವಗೌಡ, ಗುತ್ತಿಗೆದಾರ ರಜತ್, ಗ್ರಾಪಂ ಸದಸ್ಯ ಮಹೇಶ್ ಆಚಾರ್ಯ, ಪಂದ್ಯಾವಳಿ ಆಯೋಜಕ ಅಕ್ಷಯ್ ನಾಯರ್, ಸಚಿನ್ ಸೀಕೆ, ಕಿಶೋರ್ ಆಚಾರ್ಯ, ಸುಭಾಷ್ ಆಚಾರ್ಯ, ಸವಿನ್ ಆಚಾರ್ಯ, ಚೈತನ್ಯ ವೆಂಕಿ, ಜಗದೀಶ್ ಅರಳೀಕೊಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net