

ಹುಬ್ಬಳ್ಳಿ: ನಗರದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿದ್ದ ಅಂಗವಿಕಲರ ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗೆ ಬುಧವಾರ ಸಂಜೆ ಸಂಭ್ರಮದ ತೆರೆ ಬಿತ್ತು. ಸದರ್ನ್ ಸ್ಮಾಷರ್ಸ್ ತಂಡವು 60 ರನ್‌ಗಳ ಜಯ ದಾಖಲಿಸಿ ಅಜಿತ ವಾಡೇಕರ ಟ್ರೋಫಿ ಗೆದ್ದುಕೊಂಡಿತು.
ಮುಂಬೈನ ಅಖಿಲ ಭಾರತ ದೈಹಿಕ ಅಂಗವಿಕಲರ ಸಂಸ್ಥೆ, ಹುಬ್ಬಳ್ಳಿಯ ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್ ಆಶ್ರಯದಲ್ಲಿ ಅಜಿತ್ ವಾಡೇಕರ್ ಅವರ ಸ್ಮರಣಾರ್ಥ ಆಯೋಜಿಸಿದ್ದ "ಅಜಿತ ವಾಡೇಕರ್ ಟ್ರೋಫಿ' ರಾಷ್ಟ್ರ ಮಟ್ಟದ ಅಂಗವಿಕಲರ ಕ್ರಿಕೆಟ್ ಪಂದ್ಯಾವಳಿಯು ಕ್ರೀಡಾ ಪ್ರೇಮಿಗಳಿಗೆ ರಸದೌತಣ ಉಣಬಡಿಸಿತು.
ಇಲ್ಲಿಯ ರಾಜನಗರ ಕೆಎಸ್ಸಿಎ ಮೈದಾನ ಸೇರಿ ಮೂರು ಕ್ರೀಡಾಂಗಣಗಳಲ್ಲಿ ಎಂಟು ತಂಡಗಳನ್ನು ಮಾಡಿ 15 ಪಂದ್ಯಗಳನ್ನು ಆಡಿಸಲಾಯಿತು.
ರಾಜನಗರ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ಅಂತಿಮ ಪಂದ್ಯದಲ್ಲಿ ಅತ್ಯುತ್ತಮ ಸಾಧನೆ ತೋರುವ ಮೂಲಕ ಸದರ್ನ್ ಸ್ಮಾಷರ್ಸ್ ತಂಡವು 60 ರನ್‌ಗಳ ಜಯ ದಾಖಲಿಸಿ ಅಜಿತ ವಾಡೇಕರ ಟ್ರೋಫಿ ಪಡೆದುಕೊಂಡಿತು. ವೆಸ್ಟರ್ನ್ ರೇಂಜರ್ಸ್ ರನ್ನರ್ ಅಪ್ಗೆ ತೃಪ್ತಿಪಟ್ಟುಕೊಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸದರ್ನ್ ಶ್ಮಾಷರ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ ಎರಡು ವಿಕೆಟ್ ಕಳೆದುಕೊಂಡು 197 ರನ್ ಸೇರಿಸಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ವೆಸ್ಟರ್ನ್ ರೇಂಜರ್ಸ್ ಕಲಿಗಳು 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 137 ರನ್ ಗಳಿಸುವಲ್ಲಿ ಯಶಸ್ವಿಯಾದರು.
ಮೂರು ಲೀಗ್ ಮ್ಯಾಚ್ನಲ್ಲಿಯೂ ಅತ್ಯುತ್ತಮ ಪ್ರದರ್ಶನ ತೋರಿದ ಸದರ್ನ್ ಸ್ಮಾಷರ್ಸ್ ತಂಡದ ಆಟಗಾರರು ಸೆಮಿೈನಲ್ನಲ್ಲಿ ನಾರ್ದರ್ನ್ ಫ್ರಾಂಟಿಯರ್ಸ್ ಜತೆಗಿನ ಪಂದ್ಯದಲ್ಲಿ ಆರು ವಿಕೆಟ್ ಜಯ ದಾಖಲಿಸಿದ್ದರು. ಹೀಗೆ ಟೂರ್ನಿಯ ಎಲ್ಲ ಪಂದ್ಯಗಳಲ್ಲಿ ತಂಡವು ಭರ್ಜರಿ ಪ್ರದರ್ಶನ ನೀಡಿ ಚಾಂಪಿಯನ್ಶಿಪ್ ಪಡೆದುಕೊಂಡಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ತೋರಿದ ಅನೀಶ್ ರಾಜನ್, ಜಿತೇಂದ್ರ ವಿ.ಎನ್., ನರೇಂದ್ರ, ರಮೇಶ ನಾಯ್ಡು ಅವರು ಈ ಶ್ಮಾಷರ್ಸ್ ತಂಡದಲ್ಲಿ ಆಟ ಆಡಿದರು.
ನರೇಂದ್ರ ಮಂಗೋರೆ ಔಟಾಗದೇ ಕೇವಲ 22 ಎಸೆತಗಳಲ್ಲಿ 59ರನ್ ಸಿಡಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿದರು. ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು.
ತಂಡಗಳು: ಸದರ್ನ್ ಸ್ಮಾಷರ್ಸ್, ವೆಸ್ಟರ್ನ್ ರೇಂಜರ್ಸ್, ಸೆಂಟ್ರಲ್ ಕಮಾಂಡೋಸ್, ನಾದರ್ನ್ ್ರಾಂಟಿಯರ್ಸ್, ಈಸ್ಟರ್ನ್ ಈಗಲ್ಸ್, ಅಜಿತ್ ವಾಡೇಕರ ವಾರಿಯರ್ಸ್, ಸಿಎಸ್ ಇನ್ಫೋಕಾಮ್ ಚಾಲೆಂಜರ್ಸ್, ಬೋರ್ಡ್ ಪ್ರೆಸಿಡೆಂಟ್ ಬ್ಲಾಸ್ಟರ್ಸ್ ಸೇರಿ ಎಂಟು ತಂಡಗಳನ್ನು ರಚಿಸಲಾಗಿತ್ತು. ಮೂರು ದಿನಗಳ ಪಂದ್ಯಾವಳಿ ಕ್ರಿಕೆಟ್ ಪ್ರಿಯರಿಗೆ ಕ್ರೀಡಾಸ್ಫೂತಿರ್ ನೀಡುವಲ್ಲಿ ಯಶ ಕಂಡಿತು.
ರೇಖಾ ಅಜಿತ ವಾಡೇಕರ್, ಪ್ರಸಾದ ದೇಸಾಯಿ, ವಿನೋದ ದೇಶಪಾಂಡೆ, ಬ್ರಿಜೆಶ್ ಸೋಲ್ಕರ್, ಅಶೋಕ ವಾಡೇಕರ್, ಶಿವಾನಂದ ಗುಂಜಾಳ, ಬಾಬಾ ಬೂಸದ ಇದ್ದರು.