

ತುಮಕೂರು: ಜಿಲ್ಲೆಯ 330 ಗ್ರಾಪಂಗಳಲ್ಲಿಯೂ ಎಲ್ಲ ಆಸ್ತಿಗಳನ್ನು ಭೌತಿಕ ಸಮೀಕ್ಷೆ ಮಾಡಲಾಗುತ್ತಿದ್ದು, ಫೆ.15ರೊಳಗೆ ಪಂಚತಂತ್ರದಲ್ಲಿ ಅಳವಡಿಸಿ ತೆರಿಗೆ ವ್ಯಾಪ್ತಿಗೆ ಒಳಪಡಿಸುವಂತೆ ಕರ್ನಾಟಕ ಪಂಚಾಯತ್ ರಾಜ್ ಇಲಾಖೆ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಮಂಗಳವಾರ ಜಿಪಂ ವ್ಯಾಪ್ತಿಯ ಎಲ್ಲ ಆಸ್ತಿಗಳ ಸಮೀಕ್ಷೆ ಮತ್ತು ಆಸ್ತಿ ತೆರಿಗೆ ಪರಿಷ್ಕರಣೆ ಕುರಿತು ಜಿಲ್ಲೆಯ ಎಲ್ಲ ತಾಪಂ ಇಒ ಮತ್ತು ಪಿಡಿಒಗಳಿಗೆ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಕಳೆದ ಬಜೆಟ್‌ನಲ್ಲಿ ಭೌತಿಕ ಸಮೀಕ್ಷೆಗೆ ಅನುಮೋದನೆ ನೀಡಿದ್ದು, ಕಳೆದ ವರ್ಷ ಗುಬ್ಬಿ ತಾಲೂಕು ಅಡಗೂರು ಗ್ರಾಪಂನಲ್ಲಿ ಪ್ರಾಯೋಗಿಕವಾಗಿ ಮ್ಯಾನ್ಯುಯಲ್ ಸಮೀಕ್ಷೆಯ ಪೈಲಟ್ ಕಾರ್ಯಕ್ರಮ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗಿದೆ ಎಂದರು.
ಮೊದಲ ಹಂತದಲ್ಲಿ ಕಳೆದ ವರ್ಷ ಜ.24ರಿಂದ ಪ್ರತಿ ತಾಲೂಕಿನ ಐದು ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡು ಗ್ರಾಪಂವಾರು ಸಾಧಿಸಿದ ಮ್ಯಾನ್ಯುಯಲ್ ಸಮೀಕ್ಷೆಯ ಪ್ರಗತಿ ಪರಿಶೀಲನೆ ನಡೆಸಿದರು. 331 ಗ್ರಾಮ ಪಂಚಾಯಿತಿಗಳಲ್ಲಿಯೂ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಾಗಿದೆ, ಪ್ರತಿ ತಾಲೂಕಿನಿಂದ ಆಯ್ದ 5 ಗ್ರಾಪಂ ಪಿಡಿಒಗಳಿಗೆ ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮ್ಯಾನ್ಯುಯಲ್ ಸಮೀಕ್ಷೆ ಮಾಡಿದ ನಂತರ ಉಪನೋಂದಣಾಧಿಕಾರಿ ಆಸ್ತಿಗಳ ನಿಗದಿತ ಮೌಲ್ಯದ ಆಧಾರದಲ್ಲಿ ಕಡ್ಡಾಯವಾಗಿ ತೆರಿಗೆ ಪರಿಷ್ಕರಣೆ ಮಾಡಬೇಕಾಗುತ್ತದೆ ಎಂದರು.
ಪಂಚತಂತ್ರ ಮತ್ತು ಇ-ಸ್ವತ್ತು ತಂತ್ರಾಂಶಗಳಲ್ಲಿ ಸೇರ್ಪಡೆಗೊಳ್ಳದೆ ಇರುವ ಆಸ್ತಿಗಳನ್ನು ಗುರುತಿಸಿ ಸೇರ್ಪಡೆಗೊಳಿಸುವುದು ಮತ್ತು ಸದರಿ ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದು, ಪಂಚತಂತ್ರ ತಂತ್ರಾಂಶದಲ್ಲಿ ಸೇರ್ಪಡೆಗೊಂಡಿದ್ದರೂ ಕೂಡ ಇ-ಸ್ವತ್ತು ತಂತ್ರಾಂಶದಲ್ಲಿ ಸೇರ್ಪಡೆಗೊಂಡಿಲ್ಲದೆ ಇರುವ ಆಸ್ತಿಗಳನ್ನು ಸೇರ್ಪಡೆಗೊಳಿಸಿ ತೆರಿಗೆ ವ್ಯಾಪ್ತಿಗೆ ತರುವುದು, ಇ-ಸ್ವತ್ತು ತಂತ್ರಾಂಶದಲ್ಲಿ ಸೇರ್ಪಡೆಗೊಂಡಿರುವ ಆಸ್ತಿಗಳನ್ನು ಪರಿಶೀಲಿಸಿ ದೃಢೀಕರಿಸಿರುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಜಿಪಂ ಶುಭಾಕಲ್ಯಾಣ್ ಮಾತನಾಡಿ, ಫೆ.15ನೇ ತಾರೀಕಿನೊಳಗೆ ಗ್ರಾಪಂಗಳಲ್ಲಿ ಮ್ಯಾನ್ಯುಯಲ್ ಸಮೀಕ್ಷೆ ಪೂರ್ಣಗೊಳಿಸಲು ಎಲ್ಲ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು. ಉಪಕಾರ್ಯದರ್ಶಿ ಟಿ.ಕೆ.ರಮೇಶ್, ಸಂಪ್ಮೂನೂಲ ವ್ಯಕ್ತಿಗಳಾದ ಕೆ.ಜಿ ಜಗದೀಶ್ ಮಾತನಾಡಿದರು.