

ಭಾರತೀಯ ಸೇನೆಯ ‘ಅಗ್ನಿವೀರ’ ನೇಮಕಾತಿಯ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳ ದೈಹಿಕ ಪರೀಕ್ಷೆಯಲ್ಲಿ ಒಟ್ಟಾರೆ 1,503 ಅಭ್ಯರ್ಥಿಗಳು ಭಾಗಿಯಾಗಿ ತಮ್ಮ ದೈಹಿಕ ಸಾಮರ್ಥ್ಯ ಸಾಬೀತುಪಡಿಸಿದರು.
ಅಗ್ನಿವೀರ ಜನರಲ್ ಡ್ಯೂಟಿ, ಟೆಕ್ನಿಕಲ್, ಕ್ಲರ್ಕ್, ಸ್ಟೋರ್ ಕೀಪರ್ ಟೆಕ್ನಿಕಲ್, ಟ್ರೇಡ್ಸ್‌ಮನ್ ಹುದ್ದೆಗಳಿಗೆ ಏಪ್ರಿಲ್ ತಿಂಗಳಲ್ಲಿ ನಡೆದ ಸಾಮಾನ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ 1,723 ಅಭ್ಯರ್ಥಿಗಳಿಗಾಗಿ ಕಳೆದ ಮೂರು ದಿನಗಳಿಂದ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ದೈಹಿಕ ಪರೀಕ್ಷೆಯಲ್ಲಿ ಒಟ್ಟಾರೆ 220 ಅಭ್ಯರ್ಥಿಗಳು ಗೈರಾಗಿದ್ದರು.
ಗುರುವಾರ ನಡೆದ ದೈಹಿಕ ಪರೀಕ್ಷೆಯಲ್ಲಿ 423 ಅಭ್ಯರ್ಥಿಗಳ ಪೈಕಿ 359 ಅಭ್ಯರ್ಥಿಗಳು ಮಾತ್ರ ಭಾಗವಹಿಸಿದ್ದು, 64 ಅಭ್ಯರ್ಥಿಗಳು ಗೈರಾದರು. ಭಾಗವಹಿಸಿದ್ದ ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಪರೀಕ್ಷೆ ಮುಗಿದ್ದು, ವೈದ್ಯಕೀಯ ಪರೀಕ್ಷೆ, ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಶುಕ್ರವಾರ ನಡೆಯಲಿದೆ ಎಂದು ನೋಡಲ್ ಅಧಿಕಾರಿ ಮೇಜರ್ ಡಾ.ಜೆ.ಆರ್.ಬಾಲಸುಬ್ರಹ್ಮಣ್ಯಂ ‘ವಿಜಯವಾಣಿ’ಗೆ ತಿಳಿಸಿದರು.
ಭಾರತೀಯ ಸೇನೆ ಬೆಂಗಳೂರು ವಿಭಾಗದ ನೇಮಕಾತಿ ಅಧಿಕಾರಿ ಗೌರವ್ ತಪ್ಪಾ ನೇತೃತ್ವದಲ್ಲಿ ದೈಹಿಕ ಪರೀಕ್ಷೆ ನಡೆದಿದೆ.