

ಮಂಗಳೂರು: ಕೆತ್ತಿಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಭೂಕುಸಿತ ಉಂಟಾಗಿರುವುದು ಸ್ವಯಂಕೃತ ಅಪರಾಧವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.
ಮಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಆ ರೀತಿ ಗುಡ್ಡ ಕೊರೆಯಲು, ಮಣ್ಣು ಸಾಗಾಟಕ್ಕೆ ಅನುಮತಿ ನೀಡಿದವರಾರು? ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಹಾಗೂ ಮೇಲ್ಭಾಗದಲ್ಲಿರುವವರನ್ನು ಬೇರೆಡೆ ಸ್ಥಳಾಂತರಿಸಲು ದ.ಕ. ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದರು.
ವಿಪತ್ತು ನಿರ್ವಹಣೆಗೆ ಸಂಬಂಧಿಸಿ ದ.ಕ. ಜಿಲ್ಲೆಯಲ್ಲಿ ಪಂಚಾಯಿತಿ ಮಟ್ಟದಲ್ಲಿ ವಿಪತ್ತು ನಿರ್ವಹಣಾ ಸಮಿತಿ ರಚಿಸಿ, 75ಗ್ರಾಮ ಪಂಚಾಯಿತಿಗೆ ತುರ್ತು ಪರಿಹಾರ ಕ್ರಮಕ್ಕೆ ತಲಾ 25ಸಾವಿರ, 130ಗ್ರಾಮ ಪಂಚಾಯಿತಿಗೆ ತಲಾ 15ಸಾವಿರ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿಯೇ ಮಾದರಿಯಾಗಿ ಈ ಕ್ರಮ ರೂಪಿಸಿರುವ ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಓರನ್ನು ಅಭಿನಂದಿಸುವುದಾಗಿ ಮಂಜುನಾಥ ಭಂಡಾರಿ ಹೇಳಿದರು.
ವಯನಾಡ್‌ನ ದುರಂತದ ಹಿನ್ನೆಲೆಯಲ್ಲಿ ಮಾಧವ ಗಾಡ್ಗೀಳ್ ವರದಿಯನ್ನು ಜಾರಿಗೊಳಿಸುವ ಕುರಿತಂತೆ ಹೆಚ್ಚುತ್ತಿರುವ ಕೂಗಿಗೆ ಸಂಬಂಧಿಸಿ ಕ್ರಮ ವಹಿಸಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಂಜುನಾಥ ಭಂಡಾರಿ, ವಯನಾಡ್ ಭೂಕುಸಿತ ದುರ್ಘಟನೆ ನಾಡಿಗೆ ದೊಡ್ಡ ಸಂದೇಶವನ್ನು ನೀಡಿದೆ. ನಾವು ಇದೇ ರೀತಿ ನಿರ್ಲಕ್ಷ್ಯ ಮುಂದುರವರಿಸಿದರೆ ನಮ್ಮ ಪಶ್ಚಿಮ ಘಟ್ಟಕ್ಕೂ ಅಪಾಯ ತಪ್ಪಿದಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು, ಸಚಿವರ ಜತೆ ಮಾತನಾಡುವುದಾಗಿ ಹೇಳಿದರು.