

ಕ್ರೀಡೆ ಎಲ್ಲರಲ್ಲೂ ದೈಹಿಕ ಹಾಗೂ ಮಾನಸಿಕವಾಗಿ ಸದೃಢವನ್ನಾಗಿಸುತ್ತದೆ. ಇದರಿಂದ ಅವರ ಜೀವನ ಸಾಧನೆಯ ಹಾದಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಅಂತಾರಾಷ್ಟ್ರೀಯ ಅಥ್ಲೀಟ್ ಎಂ.ಯೋಗೇಂದ್ರ ಹೇಳಿದರು.
ಹರಿ ವಿದ್ಯಾಲಯದ ವತಿಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಮೂರನೇ ಆವೃತ್ತಿಯ ವಿದ್ಯಾರ್ಥಿ ರನ್‌ಗೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆ ವಿದ್ಯಾರ್ಥಿಗಳ ಜೀವನದ ಬಹುಮುಖ್ಯ ಅಂಶ. ಶಿಕ್ಷಣ ಮತ್ತು ಅಧ್ಯಾತ್ಮ ಬೇರೆ ಅಲ್ಲ, ಅದರಲ್ಲಿ ಕ್ರೀಡೆಯೂ ಒಂದು. ಈ ಮೂರೂ ಸಮರ್ಪಕವಾಗಿ ಮಕ್ಕಳಲ್ಲಿ ಬೆರೆತರೆ ಅವರು ವಿಶ್ವಮಾನವರಾಗುತ್ತಾರೆ ಎಂದರು.
ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಮಾತನಾಡಿ, ವಿದ್ಯಾರ್ಥಿಗಳು ಪಾಠದ ಜತೆಗೆ ಆಟದಲ್ಲೂ ಭಾಗವಹಿಸಬೇಕು. ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗುವುದರಿಂದ ವಿದ್ಯಾರ್ಥಿಗಳ ಭವಿಷ್ಯವೂ ಉಜ್ವಲ ಆಗುತ್ತದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಬೆಳೆಯಲು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸಹಕಾರಿಯಾಗುತ್ತದೆ ಎಂದರು.
ಹರಿ ವಿದ್ಯಾಲಯದ ಕಾರ್ಯದರ್ಶಿ ಎಚ್.ಆರ್.ಭಗವಾನ್ ಮಾತನಾಡಿ, ವಿದ್ಯಾರ್ಥಿ ರನ್ ಅನ್ನು ಮೂರನೇ ಬಾರಿಗೆ ಆಯೋಜಿಸಲಾಗಿದೆ. ಈ ಬಾರಿ ಬಂದಿರುವ ಪ್ರತಿಕ್ರಿಯೆ ನೋಡಿ ನಮಗೆ ಬಹಳ ಸಂತಸವಾಗಿದೆ. ಸುಮಾರು 400 ಹೆಚ್ಚು ಸ್ಪರ್ಧಾಳುಗಳು ಮೂರು ವಿವಿಧ ವಿಭಾಗಗಳಲ್ಲಿ ರಸ್ತೆ ಓಟದ ಸ್ಪರ್ಧೆಯಲ್ಲಿ ಭಾಗಿಯಾಗಿರುವುದನ್ನು ನೋಡಿ ಖುಷಿಯಾಗಿದೆ. ಇನ್ನು ಮುಂದೆಯೂ ಪ್ರತಿವರ್ಷ ಈ ಕಾರ್ಯಕ್ರಮ ಮಾಡುತ್ತೇವೆ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಹೇಳಿದರು.
ಹರಿ ವಿದ್ಯಾಲಯದಿಂದ ಆರಂಭವಾದ ಓಟವು ನಗರದ ನಾನಾ ಭಾಗದಲ್ಲಿ ಸಂಚರಿಸಿದ ಮತ್ತೆ ಹರಿ ವಿದ್ಯಾಲಯದ ಆವರಣದಲ್ಲಿ ಅಂತ್ಯಗೊಂಡಿತು. ಆಡಳಿತ ಮಂಡಳಿ ಸದಸ್ಯರು, ದೈಹಿಕ ಶಿಕ್ಷಣ ನಿರ್ದೇಶಕ ಶ್ರೀಕಾಂತ್ ಸೇರಿದಂತೆ ಇತರರಿದ್ದರು.
5 ಕಿ.ಮೀ. ಪುರುಷರ ವಿಭಾಗ : ಪುರುಷೋತ್ತಮ್(ಪ್ರಥಮ), ಮಣಿಕಂಠ (ದ್ವಿತೀಯ), ಶ್ರೀಧರ್(ತೃತೀಯ), 5 ಕಿ.ಮೀ. ಮಹಿಳೆಯರ ವಿಭಾಗ ಆರ್.ಉಷಾ(ಪ್ರ), ಎಂ.ಕೆ.ಚಿಕ್ಕಮ್ಮ(ದ್ವಿ), ಮೋನಿಕಾ(ತೃ)., 3 ಕಿ.ಮೀ. 16 ವರ್ಷದ ಒಳಗಿನ ಬಾಲಕರ ವಿಭಾಗ ದಲ್ಲಿ ಎಚ್.ಡಿ.ದೊರೆ(ಪ್ರ), ವಿ.ಮದನ್(ದ್ವಿ), ಎಂ.ದಿಲೀಪ್(ತೃ)., 3 ಕಿ.ಮೀ. 16 ವರ್ಷದ ಒಳಗಿನ ಬಾಕಿಯರ ವಿಭಾಗದಲ್ಲಿ ಜಯಶ್ರೀ(ಪ್ರ), ಪುಣ್ಯಶ್ರೀ(ದ್ವಿ), ದಿವ್ಯಶ್ರೀ(ತೃ)., 1 ಕಿ.ಮೀ. 10 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ಜೀವನ್ ಅರುಣ್‌ಕುಮಾರ್(ಪ್ರ), ಯಧುನಂದನ್(ದ್ವಿ), ಎಂ.ಸಮರ್ಥ್(ತೃ)., 1 ಕಿ.ಮೀ. 10 ವರ್ಷದ ಒಳಗಿನ ಬಾಕಿಯರ ವಿಭಾಗದಲ್ಲಿ ಆರ್.ಚಿರಶ್ವಿ(ಪ್ರ), ಟಿ.ಶಮಿತಾ(ದ್ವಿ), ಎಸ್.ಮನಸ್ವಿ(ತೃ) ಬಹುಮಾನ ಪಡೆದರು.