

ಹನಗೋಡು : ಮಹಿಳೆಯರಿಗೆ ಸಮಗ್ರ ಶಿಕ್ಷಣ ವ್ಯವಸ್ಥೆ ದೊರಕಿಸಿಕೊಟ್ಟರೆ ದೇಶದ ಪ್ರಗತಿಗೆ ಪೂರಕವಾಗಲಿದೆ ಎಂದು ಮುಖ್ಯ ಶಿಕ್ಷಕ ಕುಮಾರಸ್ವಾಮಿ ತಿಳಿಸಿದರು.
ಹನಗೋಡು ಹೋಬಳಿಯ ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಹಿಳೆಯರನ್ನು ಅಡುಗೆ ಮನೆಗೆ ಮಾತ್ರಸೀಮಿತಗೊಳಿಸಿದ್ದ ಕಾಲಘಟ್ಟದಲ್ಲಿ ಸಾವಿತ್ರಿಬಾಯಿ ಅವರು ದೊಡ್ಡ ಕ್ರಾಂತಿ ಮಾಡಿದರು. ಮಹಿಳೆಯರ ಜ್ಞಾನಭಂಡಾರದಲ್ಲಿ ಅಡಗಿದ್ದ ಪ್ರತಿಭೆ ಗುರುತಿಸಿ, ಅವರಿಗೆ ಅಕ್ಷರ ಕಲಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗುವ ಸೇವೆ ಮಾಡಿದರು. ಪುರುಷ ಪ್ರಧಾನವಾಗಿದ್ದ ಸಮಾಜದಲ್ಲಿ ಮಹಿಳೆಯರಿಗೆ ಶಿಕ್ಷಣ ನೀಡಿ, ಶಾಲೆ ತೆರೆದು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಪರಿಣಾಮವಾಗಿ ಇಂದು ವಿವಿಧ ರಂಗದಲ್ಲಿ ಸ್ತ್ರೀಯರು ಸಾಧನೆ ಮಾಡಲು ಅನುವಾಗಿದೆ ಎಂದರು. ಸಾವಿತ್ರಿ ಬಾಯಿಫುಲೆ ಇತಿಹಾಸದಲ್ಲಿ ಒಂದು ದಾಖಲೆ ಬರೆದು ಅಜರಾಮರರಾಗಿದ್ದಾರೆ . ಅವರ ಜೀವನ ಚರಿತ್ರೆ, ಆದರ್ಶ, ನಡೆದುಬಂದ ದಾರಿ ಎಲ್ಲವೂ ಇಂದಿನವರಿಗೆ ದಾರಿದೀಪವಾಗಲಿ ಎಂದವರು ಆಶಿಸಿದರು. ಸಹಶಿಕ್ಷಕರಾದ ಮಂಜುನಾಥ್, ಪ್ರೀತಿ, ಆಯಿಷಾ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.