

ಹುಣಸೂರು: ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮಹಿಳಾ ಹಕ್ಕುಗಳನ್ನು ಸಂರಕ್ಷಿಸಲು ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ 19ನೇ ಶತಮಾನದಲ್ಲೇ ಹೋರಾಟ ನಡಸಿದ ಧೀರೋಧಾತ್ತ ಮಹಿಳೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಅಭಿಪ್ರಾಯಪಟ್ಟರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ತಾಲೂಕು ಸಾವಿತ್ರಿ ಬಾಯಿ ಫುಲೆ ಸಂಘದಿಂದ ನಗರದ ಗುರುಭವನದಲ್ಲಿ ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆ ಅವರ 194ನೇ ಜಯಂತಿ ಮತ್ತು ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಾವಿತ್ರಿ ಬಾಯಿ ಫುಲೆ ತಮ್ಮ ಜೀವನದುದ್ದಕ್ಕೂ ಸಂಘಟನಾತ್ಮಕ ಹೋರಾಟ ನಡೆಸುವ ಮೂಲಕ ಸಮಾಜ ಪರಿವರ್ತನೆಗೆ ನಾಂದಿ ಹಾಡಿದರು. ಇಂದು ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಮೀಸಲು ನೀಡುವ ಮಟ್ಟಕ್ಕೆ ಪರಿವರ್ತನೆಯಾಗಲು ಸಾವಿತ್ರಿ ಬಾಯಿ ಫುಲೆ ಅವರಂತಹ ಹಲವು ಮಹನೀಯರ ದೂರದೃಷ್ಟಿಯ ಹೋರಾಟವೇ ಕಾರಣ ಎಂದರು.
ಇಂದಿನ ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಕರಾಗದೆ ತಾಯಿಹೃದಯದಿಂದ ಕರ್ತವ್ಯ ನಿರ್ವಹಿಸಬೇಕು. ಪಠ್ಯದ ಜೊತೆಗೆ ನಿಜಜೀವನದ ಬದುಕನ್ನೂ ಕಲಿಸಬೇಕು. ವರ್ಷದಲ್ಲಿ ಒಂದು ದಿನ ಸಾವಿತ್ರಿಬಾಯಿ ಜಯಂತಿ ಆಚರಿಸಿದರೆ ಇನ್ನುಳಿದ 364 ದಿನಗಳು ನೀವೇ ಸ್ವತ: ಸಾವಿತ್ರಿ ಬಾಯಿ ಫುಲೆಯಾಗಬೇಕೆಂದು ಕಿವಿಮಾತು ಹೇಳಿದರು.
ನಗರದ ಸರ್ಕಾರಿ ಮಹಿಳಾ ಕಾಲೇಜಿನ ಸಹಪ್ರಾಧ್ಯಾಪಕಿ ಡಾ.ಕಾವ್ಯ ಮಾತನಾಡಿ, ಅಂದಿನ ಕಾಲದಲ್ಲಿ ಮಹಿಳೆಯರು ಅನುಭವಿಸುತ್ತಿರುವ ಎಲ್ಲ ಶೋಷಣೆಗಳಿಗೂ ಶಿಕ್ಷಣ ನೀಡುವುದೊಂದೇ ಪರಿಹಾರವೆಂದು ಸಾವಿತ್ರಿ ಫುಲೆ ನಂಬಿದ್ದರು. ಅದರ ಫಲ ಇಂದಿಗೂ ಹೆಣ್ಣುಮಕ್ಕಳು ಸುಶಿಕ್ಷಿತರಾಗಬೇಕೆನ್ನುವ ಬಲವಾದ ನಂಬಿಕೆ ಮತ್ತು ಯೋಜನೆಗಳು ಜಾರಿಗೊಂಡಿವೆ. ದೇಶದಲ್ಲಿ ಮಹಿಳಾ ಸಾಕ್ಷರತೆ 75.3 ಇದ್ದು, ಶೇ.100ರಷ್ಟು ತಲುಪಬೇಕಿದೆ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಐವರು ಶಿಕ್ಷಕಿಯರಾದ ಲಲಿತಮ್ಮ, ವೀಣಾ, ಜಗದಾಂಬ, ಎಚ್.ಆರ್.ಸುಧಾಮಣಿ ಮತ್ತು ಪ್ರೇಮರನ್ನು ಸನ್ಮಾನಿಸಲಾಯಿತು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಶಿಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಹೇಮಲತಾ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತಿ ಮಾತನಾಡಿದರು. ಸಾವಿತ್ರಿ ಬಾಯಿ ಫುಲೆ ಸಂಘದ ಅಧ್ಯಕ್ಷೆ ಕೌಸಲ್ಯಾ ಆಶಯದ ನುಡಿಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಜ್ಯೋತಿ, ಪದಾಧಿಕಾರಿಗಳು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಂದ್ರ, ದೈಹಿಕ ಶಿಕ್ಷಣ ಪರಿವೀಕ್ಷಕ ಲೋಕೇಶ್ ವಿವಿಧ ಸಂಘಗಳ ಪದಾಧಿಕಾರಿಗಳು ಮತ್ತು 400ಕ್ಕೂ ಹೆಚ್ಚು ಶಿಕ್ಷಕಿಯರು ಭಾಗವಹಿಸಿದ್ದರು.