

ಕಡೂರು: ತತ್ವ ಪದಗಳೇ ಜನರ ಜೀವನಾಡಿಯಾಗಿದ್ದು, ಗ್ರಾಮೀಣ ಭಾಗದ ಜನರು ನೆಮ್ಮದಿ ಹಾಗೂ ಆಯಾಸ ಕಳೆದುಕೊಳ್ಳಲು ಭಜನೆಗಳ ಮೂಲಕ ಜನರನ್ನು ಸಂಘಟಿಸಿಕೊಂಡು ತತ್ವ ಪದಗಳನ್ನು ಹೇಳಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಮುಗುಳಿ ಲಕ್ಷ್ಮೀದೇವಮ್ಮ ಹೇಳಿದರು.
ಅಜ್ಜಂಪುರ ತಾಲೂಕಿನ ಗಡಿಹಳ್ಳಿ ಗ್ರಾಮದಲ್ಲಿ ಕಸಾಪ ಆಯೋಜಿಸಿದ್ದ ಜಿಲ್ಲಾ ತತ್ವಪದಗಾರರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಜನರು ಜನರಿಂದ ಜನರಿಗಾಗಿ ಜನಪದ ನುಡಿಸುತ್ತಿದ್ದು. ತತ್ವ ಪದಗಳನ್ನು ಆಧ್ಯಾತ್ಮ ಹಾಗೂ ಭಜನೆಗಳ ಮೂಲಕ ದೇವರ ಪೂಜಾ ಸಮಯದಲ್ಲಿ ಹೇಳುತ್ತಾರೆ. ಆ ತತ್ವಪದಗಳು ಜನರಿಗೆ ನೆಮ್ಮದಿ ಕೊಡುತ್ತವೆ. ಶಾಂತಿ ಆಧ್ಯಾತ್ಮದೊಂದಿಗೆ ಮುಕ್ತಿ ಪಡೆಯುವ ಹಂಬಲ ಈ ತತ್ವಪದಗಳಲ್ಲಿ ಅಡಗಿದೆ. ನಮ್ಮದು ಗುರುಪರಂಪರೆ ಮಠ ಹಾಗೂ ಗುರು ಗೋವಿಂದಾರ್ಯರ ಅನುಯಾಯಿಗಳಿಂದ ಕಟ್ಟುನಿಟ್ಟಾದ ನಿಯಮಗಳೊಂದಿಗೆ ತತ್ವಪದಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕೆಲಸ ನಡೆಯುತ್ತಿದೆ ಎಂದರು.
ಜಿಪಂ ಮಾಜಿ ಸದಸ್ಯ ಎಂ ಕೃಷ್ಣಮೂರ್ತಿ ತತ್ವಪದ ಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿ, ನಮ್ಮ ನೆಲದ ಆಚಾರ ವಿಚಾರ. ಗುರು ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಲು ಎಲ್ಲರೂ ಸಹಕಾರ ನೀಡಬೇಕು. ತತ್ವ ಪದಗಳು ಜನರ ಅನುಭಾವದಿಂದ ಬಂದಿವೆ. ಇವು ಜನರ ಅನುಭವಗಳು ಸಹ ಆಗಿವೆ. 24 ಜನಕ್ಕೆ ತತ್ವಪದ ಶ್ರೀಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.