ಪ್ರತಿಕೋದ್ಯಮ ವಿದ್ಯಾರ್ಥಿಗಳಿಗೆ ಫೋಟೋಗ್ರಫಿ ಕಾರ್ಯಾಗಾರ

udp-19-sp
Published on

ಉಡುಪಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ರಜತ ಮಹೋತ್ಸವ ಸಮಿತಿ, ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್ ಉಡುಪಿ ವಲಯದ ಪ್ರಾಯೋಜಕತ್ವದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಪ್ರತಿಕೋದ್ಯಮ ವಿದ್ಯಾರ್ಥಿಗಳಿಗೆ ಫೋಟೋಗ್ರಫಿ ಕಾರ್ಯಾಗಾರವನ್ನು ಶನಿವಾರ ಉಡುಪಿ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಾಗಾರವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಾತನಾಡಿ, ಮಾಧ್ಯಮಗಳು ಕೆಲವೊಂದು ಸೂಕ್ಷ್ಮ ವಿಚಾರ, ವಿವಾದಗಳನ್ನು ವೀಕ್ಷಕರ ಹಾಗೂ ಓದುಗರ ಸಂಖ್ಯೆ ಹೆಚ್ಚು ಮಾಡುವ ಉದ್ದೇಶ ಇಟ್ಟುಕೊಂಡು ಸುದ್ದಿ ಮಾಡದೆ, ಅದರ ಸೂಕ್ಷ್ಮತೆಯನ್ನು ಕಾಪಾಡಿಕೊಂಡು ಸತ್ಯಾಸತ್ಯತೆಯನ್ನು ಅರಿತು ವರದಿ ಮಾಡಬೇಕು. ಸೂಕ್ಷ್ಮತೆಯಿಂದ ಕೂಡಿದ ಸುದ್ದಿಗಳನ್ನು ಅದರ ನೈಜ್ಯತೆ, ಗಂಭೀರತೆ, ಪ್ರಾಮುಖ್ಯತೆ ಹಾಗೂ ಆಳವನ್ನು ತಿಳಿದು ಜನರ ಮುಂದೆ ಇಟ್ಟಾಗ ಮಾತ್ರ ಅದಕ್ಕೆ ನ್ಯಾಯ ಒದಗಿಸಲು ಸಾಧ್ಯ ಎಂದರು.

ಸಾಮಾಜಿಕ ಜಾಲತಾಣಗಳಿಗೆ ಗಡಿ ಎಂಬುದು ಇಲ್ಲ. ಅಲ್ಲಿ ಯಾರು ಕೂಡ ಏನು ಬೇಕಾದರೂ ಬರೆಯಬಹುದು. ಅದರಲ್ಲಿ ಸತ್ಯ, ಸುಳ್ಳು, ವದಂತಿ ಎಲ್ಲವೂ ಇರುತ್ತದೆ. ಕೆಲವು ಜನರಿಗೆ ಕೆಲವು ವಿಷಯಗಳ ಬಗ್ಗೆ ಏನು ತಿಳಿದಿಲ್ಲದಿದ್ದರೂ ಅದರ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಇದರಿಂದ ಸಮಾಜ ಮತ್ತು ಮಾನವೀ ಯತೆಗೆ ತುಂಬಾ ಹಾನಿಯಾಗುತ್ತದೆ. ಇದು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಿಗೆ ಇರುವ ವ್ಯಾತ್ಯಾಸವಾಗಿದೆ. ಅದನ್ನು ಉಳಿಸಬೇಕಾದರೆ ಸತ್ಯವನ್ನು ಅರಿತು ಸುದ್ದಿ ಮಾಡಬೇಕು ಎಂದು ಅವರು ತಿಳಿಸಿದರು.

ಒಂದು ಫೋಟೋ ಸಾವಿರ ಶಬ್ದಗಳಿಗೆ ಸಮಾನವಾಗಿರುತ್ತದೆ. ಉತ್ತಮ ಫೋಟೋ ಅಂದರೆ ಕೇವಲ ತಂತ್ರಜ್ಞಾನ, ಕಲೆ ಮಾತ್ರ ಅಲ್ಲ. ಅದರಲ್ಲಿ ಛಾಯಾ ಚಿತ್ರಗ್ರಾಹಕನ ಫಿಲೋಸಫಿ ಕೂಡ ಮುಖ್ಯವಾಗಿರುತ್ತದೆ ಎಂದ ಅವರು, ಎಲ್ಲ ವಿಚಾರಗಳನ್ನು ತಿಳಿದಿರುವ, ಎಲ್ಲ ದೃಷ್ಠಿಕೋನದಲ್ಲಿ ಆಲೋಚನೆ ಮಾಡುವ, ಜನರಪ ಕಾಳಜಿ ಹೊಂದಿರುವ ಮತ್ತು ಸಕಾರಾತ್ಮವಾಗಿ ವಿಮರ್ಶೆ ಮಾಡುವಂತಹ ಶಕ್ತಿ ಇರುವ ವೃತ್ತಿ ಅಂದರೆ ಅದು ಪತ್ರಿಕೋದ್ಯಮ ಎಂದರು.

ಛಾಯಾಚಿತ್ರ ಹಾಗೂ ಹಳೆ ಕ್ಯಾಮೆರಾಗಳ ಪ್ರದರ್ಶನವನ್ನು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಉಡುಪಿ ವಲಯ ಅಧ್ಯಕ್ಷ ಜನಾರ್ದನ ಕೊಡವೂರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಿದ್ದರು

ಫೋಟೋಗ್ರಫಿ ಕಾರ್ಯಾಗಾರವನ್ನು ಉದಯವಾಣಿಯ ಛಾಯಾಚಿತ್ರ ಪತ್ರಕರ್ತ ಅಸ್ಟ್ರೋ ಮೋಹನ್, ನುಡಿಚಿತ್ರ ಕಾರ್ಯಾಗಾರವನ್ನು ಮಂಗಳೂರು ವಿಜಯ ಕರ್ನಾಟಕ ಹಿರಿಯ ಉಪಸಂಪಾದಕ ಸುಶೀಲೇಂದ್ರ ಕುಡುಪಾಡಿ ನಡೆಸಿಕೊಟ್ಟರು. ಇಂಡಿಯನ್ ಫೆಡರೇಶನ್ ಆಫ್ ವರ್ಕಿಂಗ್ ಜರ್ನಲಿಸ್ಟ್ ಇದರ ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ರಜತ ಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ, ಉಡುಪಿ ಪತ್ರಿಕಾ ಭವನ ಸಮಿತಿ ಸಂಚಾಲಕ ಅಜಿತ್ ಆರಾಡಿ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ಸುಭಾಷ್ ಚಂದ್ರ ವಾಗ್ಳೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಗಾರದಲ್ಲಿ ಉಡುಪಿ ಅಜ್ಜರಕಾಡು ಮಹಿಳಾ ಪ್ರಥಮ ದರ್ಜೆ ಕಾಲೇಜು, ಉಡುಪಿ ಎಂಜಿಎಂ ಕಾಲೇಜು, ಕಾರ್ಕಳ ಎಂಪಿಎಂ ಕಾಲೇಜು ಮತ್ತು ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜುಗಳ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net