ಸೃಜನಶೀಲತೆಗೆ ಛಾಯಾಗ್ರಹಣ ಉತ್ತಮ ಸಾಧನ

mysore
Published on

ಮೈಸೂರು: ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಆ್ಯಂಡ್ ವೀಡಿಯೋ ಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ಕುವೆಂಪುನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ವಿಶ್ವ ಛಾಯಾಗ್ರಹಕರ ದಿನಾಚರಣೆ ಆಯೋಜಿಸಲಾಗಿತ್ತು.


ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಛಾಯಾಗ್ರಹಣ ಎಂಬುದು ಸಮಾಜದಲ್ಲಿ ಗೌರವವನ್ನು ತಂದು ಕೊಡುವಂತಹ ಜವಾಬ್ದಾರಿಯುತವಾದ ಕೆಲಸ. ಇತಿಹಾಸ ದಾಖಲಿಸಲು, ಸೌಂದರ್ಯದ ಕ್ಷಣ ಸೆರೆ ಹಿಡಿಯಲು ಮತ್ತು ಸೃಜನಶೀಲತೆ ವ್ಯಕ್ತಪಡಿಸಲು ಛಾಯಾಗ್ರಹಣ ಒಂದು ಉತ್ತಮ ಸಾಧನ ಎಂದರು.


ಛಾಯಾಗ್ರಾಹಕರು ಉತ್ಸಾಹಿಗಳಾಗಿದ್ದು, ಸಾರ್ವಜನಿಕರಿಗೆ ಕಲೆ, ಸಂಸ್ಕೃತಿ, ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರಲು ಉತ್ತಮ ವೇದಿಕೆ ಕಲ್ಪಿಸಿಕೊಡುತ್ತಾರೆ. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಅಲ್ಲಿಯ ಸ್ಥಳೀಯ ಭಾಷೆ ಅರಿತಿರಬೇಕು. ಆದರೆ ಎಲ್ಲಿಯಾದರೂ ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದಾದ ಭಾಷೆ ಛಾಯಾಗ್ರಹಣವಾಗಿದೆ ಎಂದರು.


ಒಬ್ಬ ಛಾಯಾಗ್ರಾಹಕ ತೆಗೆಯುವಂತಹ ಒಂದು ಚಿತ್ರ ಸಾವಿರ ಕಥೆ ಹೇಳುತ್ತದೆ. ಒಂದು ಚಿತ್ರ ತೆಗೆಯಲು ಕ್ಷಣ ಮಾತ್ರವೇ ಸಾಕು. ಆದರೆ, ಹೆಚ್ಚು ಕಾಲ ತಾಳ್ಮೆ, ಸಹನೆಯಿಂದ ತಮ್ಮ ಅಮೂಲ್ಯ ಸಮಯ ವ್ಯಯ ಮಾಡಿ ಅತ್ಯುತ್ತಮ ಚಿತ್ರ ಸೆರೆ ಹಿಡಿಯುತ್ತಾರೆ. ಅಲ್ಲದೆ ನಿಜ ಜೀವನದಲ್ಲಿ ಸದಾ ಸಪ್ಪೆಮೋರೆ ಹಾಕಿಕೊಂಡು ದುಃಖಿತರಾಗಿರುವವರ ಮುಖಗಳಲ್ಲಿ ನಗುವನ್ನು ತರುವ ಶಕ್ತಿ ಛಾಯಾಗ್ರಾಹಕರಿಗೆ ಇದೆ ಎಂದರು.


ಛಾಯಾಗ್ರಹಣ ವೃತ್ತಿ ನಂಬಿ ಕೆಟ್ಟವರು ಯಾರು ಇಲ್ಲ. ಆದರೆ ವೃತ್ತಿ ಗೌರವ, ತಾಳ್ಮೆ, ಸಹನೆ ಆಯಾಯಾ ಸಂದರ್ಭಕ್ಕೆ ತಕ್ಕಂತೆ ಹೊಸ ತಂತ್ರಜ್ಞಾನಕ್ಕೆ ಹೊಂದಿಕೊಂಡು ಹೋಗುವ ಗುಣ ಬೆಳೆಸಿಕೊಳ್ಳಬೇಕು. ಆಗ ಎತ್ತರಕ್ಕೂ ಬೆಳೆಯಬಹುದು ಸಮಾಜವು ಗುರುತಿಸುತ್ತದೆ ಎಂದು ತಿಳಿಸಿದರು.
ಹಿರಿಯ ಛಾಯಾಗ್ರಾಹಕರನ್ನು ಸನ್ಮಾನಿಸಲಾಯಿತು. ಛಾಯಾಗ್ರಾಹಕ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.


ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಜಿ.ಟಿ.ದೇವೇಗೌಡ, ವನ್ಯಜೀವಿ ಛಾಯಾಗ್ರಾಹಕ ಬಿ.ಎಸ್.ಕೃಪಾಕರ್, ನ್ಯೂ ಪ್ರಿನ್ಸ್ ಕಲರ್ ಲ್ಯಾಬ್‌ನ ಸೋಮಸುಂದರ್, ಮಹದೇವಸ್ವಾಮಿ, ಅಸೋಸಿಯೇಷನ್ ಅಧ್ಯಕ್ಷ ಮಹೇಶ್ ದಡದಹಳ್ಳಿ, ಕಾರ್ಯದರ್ಶಿ ಬಿ.ಎಂ.ಸುದರ್ಶನ್, ಸಹ ಕಾರ್ಯದರ್ಶಿ ಆರ್.ಪ್ರಮೋದ್, ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ಬಿ.ಮಾದೇಶ್, ಆರೋಗ್ಯ ನಿಧಿ ಛೇರ್ಮನ್ ಶಿವಕುಮಾರ್, ಜನ ಸಂಪರ್ಕಾಧಿಕಾರಿ ಚೈತನ್ಯ ರಾವ್, ನಿರ್ದೇಶಕರಾದ ಮೋಹನ್, ಲೋಕೇಶ್, ಉಮೇಶ್, ಮಂಜುನಾಥ್, ರವಿಚಂದ್ರ, ಕಾಂತರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net