ಛಾಯಾಚಿತ್ರಗಳು ಅಳಿಯದ ಕುರುಹುಗಳು

21 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಯಾರೇ ಅಳಿದರೂ ಛಾಯಾಚಿತ್ರಗಳು ಮಾತ್ರ ನಿರಂತವಾಗಿ ಉಳಿಯುವ ಕಾಲದ ಕುರುಹುಗಳು ಎಂದು ಬಂಡಾಯ ಕವಿ ಸತೀಶ ಕುಲಕರ್ಣಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಕವಿ, ಶಿಕ್ಷಕ ಕಿರಣ ಜತ್ತಿ ಅವರ ಜೀವನಯಾನ ಚಿತ್ರ ಕಾವ್ಯ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ವಿದ್ಯಾವರ್ಧಕ ಸಂಘದ ಆವರಣದಲ್ಲಿರುವ ನೂರಾರು ಭಾವಚಿತ್ರಗಳು ಈ ಮಾತಿಗೆ ಸಾಕ್ಷಿ. ಕಾಲದ ಒಂದೊಂದು ಜೀವನ ವಿಧಾನ, ಸಾಧನಾ ಪಥಗಳನ್ನು ಸಾರುವಂತಿವೆ. ಕಲಾವಿದನ ಒಂದು ಚಿತ್ರ, ಒಂದು ಕಲಾಕೃತಿ ನೂರಾರು ನೆನಪುಗಳನ್ನು ಹುಟ್ಟು ಹಾಕಬಲ್ಲವು ಎಂದರು.

ಬಿ. ಮಾರುತಿ ಮಾತನಾಡಿ, ಕಲಾ ಪ್ರದರ್ಶನಗಳು ನಡೆದಾಗ ಮಾತ್ರ ಒಬ್ಬ ಕಲಾವಿದನ ಚಿಂತನೆಗಳು ಸಮಾಜಕ್ಕೆ ತಲುಪಿಸಲು ಸಾಧ್ಯ. ಪ್ರದರ್ಶನಗಳು ಹೆಚ್ಚು ಹೆಚ್ಚು ನಡೆದಾಗಲೇ ಕಲಾ ಕ್ಷೇತ್ರ ಬೆಳೆಯಲು, ಕಲೆಯ ಭಿನ್ನ ಶೈಲಿಗಳ ಆಸ್ವಾದ, ಕಲೆಗೆ ಪ್ರೋತ್ಸಾಹ ಸಿಗಲು ಸಾಧ್ಯ. ಫೋಟೊಗ್ರಾಫಿಗೆ ಚಿತ್ರಕಲೆಗೆ ಅವಿನಾಭಾವ ಸಂಬಂಧ ಇದೆ. ಫೋಟೊಗ್ರಾಪಿ ಬಂದಾಗ ಕಲಾವಿದರ ಅಸ್ತಿತ್ವ ಹೋಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಫೋಟೊಗ್ರಾಫಿ ಬಂದದ್ದರಿಂದಲೇ ಹಲವು ಕಲಾ ಮ್ಯೂಸಿಯಂ ಸೃಷ್ಟಿಯಾದವು ಎಂದರು.

ಕೃತಿ ಕುರಿತು ಡಾ. ಅಂಬಿಕಾ ಹಂಚಾಟೆ, ಕರಿಯಪ್ಪ ಹಂಚಿನಮನಿ, ಎಸ್​. ಆರ್​. ಹಿರೇಮಠ ಮಾತನಾಡಿದರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕಿರಣ ಜತ್ತಿ, ಛಾಯಾಗ್ರಾಹಕ ಕುಮಾರ ಕಾಟೇನಹಳ್ಳಿ, ನೇತ್ರಾ ಅಂಗಡಿ, ಸಂದೀಪ ಕುಲಕರ್ಣಿ, ಕಾವ್ಯಾ ಕುಲಕಲರ್ಣಿ, ಎಸ್​.ಬಿ. ಪಂಪಣ್ಣನವರ, ರಾಜೇಂದ್ರ ಹೆಗಡೆ, ಇತರರು ಇದ್ದರು.

ಶಂಕರ ಹಲಗತ್ತಿ ನಿರೂಪಿಸಿದರು. ಪೃಥ್ವಿರಾಜ ಬೆಟಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net