

ಮಂಡ್ಯ: ದೇಶ ವಿಭಜನೆಯ ಸಂದರ್ಭದಲ್ಲಿ ಸಂಭವಿಸಿದ ಅಪಾರ ಪ್ರಮಾಣದ ಸಾವು ನೋವುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಹೇಳಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಶನಿವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಗರಸಭೆ, ಕೆಎಸ್‌ಆರ್‌ಟಿಸಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸ್ವಾತಂತ್ರ್ಯದ ಸಂದರ್ಭದಲ್ಲಿ ದೇಶ ವಿಭಜನೆಯ ಕರಾಳದ ನೆನಪು ಛಾಯಾಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಜನರು ರೈಲು, ಹಡಗು, ವಾಹನಗಳ ಮೇಲೆ ಸಂಚರಿಸುವ ದೃಶ್ಯಗಳನ್ನು ಪ್ರದರ್ಶಿಸಲಾಗಿದೆ. ಇವುಗಳನ್ನು ಇಂದಿನ ಯುವಜನತೆ ವೀಕ್ಷಣೆ ಮಾಡಬೇಕು. ಭಾರತದ ವಿಭಜನೆಯು ಮನುಕುಲದ ಇತಿಹಾಸದಲ್ಲಿಯೇ ಎಂದೂ ಕೇಳರಿಯದ ಬಲವಂತದ ಮಹಾ ಮಾನವ ವಲಸೆಯ ವ್ಯಾಕುಲದ ಕಥೆ. ಲಕ್ಷಾಂತರ ಜನ ಅಪರಿಚಿತ ಜಾಗದಲ್ಲಿ ತಮ್ಮ ಜೀವನಕಟ್ಟಿಕೊಳ್ಳಲು ಹೊಸ ಬದುಕು ಹರಸಿ ಹೊರಟ ಘಟನೆಗಳನ್ನು ಈ ಪ್ರದರ್ಶನ ನೆನಪಿಸುತ್ತದೆ ಎಂದು ಹೇಳಿದರು.
ಪೌರಾಯುಕ್ತ ಆರ್.ಮಂಜುನಾಥ್ ಮಾತನಾಡಿ, ಸ್ವಾತಂತ್ರೃ ಬಂದ ಸಂದರ್ಭದಲ್ಲಿ ದೇಶ ವಿಭಜನೆಯಾಯಿತು. ಅಂದಿನ ಕಾಲದಲ್ಲಿ ಸಂಚಾರದ ವ್ಯವಸ್ಥೆ ಇರಲಿಲ್ಲ. ಆದ ಕಾರಣ ವಲಸೆ ಹೋಗುವಂತಹ ಸಂದರ್ಭದಲ್ಲಿ ಮಳೆ, ಗಾಳಿ, ಬಿಸಿಲಿಗೆ ಲಕ್ಷಾಂತರ ಜನರು ಸಾವನ್ನು ಅನುಭವಿಸುತ್ತಾರೆ. ಆ ಘಟನೆಯನ್ನು ಜನಸಾಮಾನ್ಯರು ನೆನಪು ಮಾಡಿಕೊಂಡು ಗೌರವ ಸಲ್ಲಿಸಬೇಕು ಎಂಬ ಮೂಲ ಉದ್ದೇಶದಿಂದ ಛಾಯಾಚಿತ್ರ ಪ್ರದರ್ಶನದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ಸದಸ್ಯರಾದ ನಾಗೇಶ್, ಶ್ರೀಧರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರುದ್ರೇಗೌಡ, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜು, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಇತರರಿದ್ದರು.