ಛಾಯಾ ಕುಟುಂಬ ಸಮ್ಮಿಲನದಲ್ಲಿ ಛಾಯಾಗ್ರಾಹಕರ ಸಂಭ್ರಮ

Photographers celebrate at Chhaya Kudumba Sammilana
Published on

ಕುಶಾಲನಗರ:

ಬದಲಾಗುತ್ತಿರುವ ತಂತ್ರಜ್ಞಾನವನ್ನು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ಛಾಯಾಗ್ರಾಹಕರು ಆಧುನಿಕ ಜಗತ್ತಿನ ಸವಾಲುಗಳನ್ನು ಎದುರಿಸಬೇಕು ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವ ಕೆ. ವೆಂಕಟೇಶ್ ಹೇಳಿದರು. ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ಇಲ್ಲಿನ ರೈತ ಸಹಕಾರ ಭವನದಲ್ಲಿ ಏರ್ಪಡಿಸಿದ್ದ ಛಾಯಾ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಛಾಯಾಗ್ರಾಹಣದ ತಂತ್ರಜ್ಞಾನ ಪ್ರತಿದಿನವೂ ಬದಲಾವಣೆ ಕಾಣುತ್ತಿದೆ. ಛಾಯಾಗ್ರಾಹಕರು ಇದನ್ನು ರೂಢಿಸಿಕೊಳ್ಳಬೇಕು. ಜನರಿಗೆ ಮೆಚ್ಚುಗೆ ಆಗುವ ರೀತಿಯಲ್ಲಿ ಕೆಲಸ ಮಾಡಬೇಕು. ಅಸಂಘಟಿಕ ಕಾರ್ಮಿಕ ವಲಯದಲ್ಲಿ ಇರುವ ಛಾಯಾಗ್ರಾಹಕರಿಗೆ ಕಾರ್ಮಿಕ ಇಲಾಖೆ ವತಿಯಿಂದ ಈಗಾಗಲೇ ಹಲವು ರೀತಿಯ ಸವಲತ್ತುಗಳನ್ನು ಒದಗಿಸಲಾಗಿದೆ. ಇನ್ನೂ ಹೆಚ್ಚಿನ ಅನುಕೂಲ ಮಾಡಿಕೊಡುವಂತೆ ಕಾರ್ಮಿಕ ಸಚಿವರ ಗಮನಕ್ಕೆ ತರಲಾಗುವುದು. ಅಗತ್ಯಬಿದ್ದರೆ ಮುಖ್ಯಮಂತ್ರಿ ಜತೆಗೆ ಕೂಡ ಮಾತನಾಡಲಾಗುವುದು. ಸ್ಥಳೀಯ ಶಾಸಕರ ಜತೆ ಮಾತನಾಡಿ ಕೊಡಗಿನ ಛಾಯಾಗ್ರಾಹಕರಿಗೆ ಸಹಾಯ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ವಾಗ್ಮಿ ಪ್ರೊ. ಕೃಷ್ಣೇಗೌಡ ಮಾತನಾಡಿ, ಮೊಬೈಲ್ ಕ್ಯಾಮೆರಾ ಬಂದ ನಂತರ ಛಾಯಾಗ್ರಹಕ ವೃತ್ತಿ ಇರುವುದಿಲ್ಲ ಎನ್ನುವ ವಾತಾವರಣ ನಿರ್ಮಾಣ ಆಗಿತ್ತು. ಆದರೆ ಛಾಯಾಗ್ರಾಹಣದಲ್ಲೇ ವಿಭಿನ್ನ ಪ್ರಯೋಗಗಳನ್ನು ಮಾಡುವ ಮೂಲಕ ವೃತ್ತಿಯಲ್ಲಿ ಹೊಸ ಸಾಧ್ಯತೆಗಳನ್ನು ಕಂಡುಕೊAಡಾಗ ಉಳಿಯಲು ಸಾಧ್ಯ ಎನ್ನುವುದು ಛಾಯಾಗ್ರಾಹಕರು ತೋರಿಸಿಕೊಟ್ಟಿದ್ದಾರೆ. ಛಾಯಾಗ್ರಹಣ ಕಲೆಯೂ ಹೌದು, ವಿಜ್ಞಾನವೂ ಹೌದು. ಇವೆರಡೂ ಚೆನ್ನಾಗಿ ಗೊತ್ತಿದ್ದವರು ಮಾತ್ರ ಉತ್ತಮ ಛಾಯಾಗ್ರಾಹಕರಾಗಲು ಸಾಧ್ಯ. ಛಾಯಾಗ್ರಾಹಕರು ಮತ್ತು ಕವಿಗಳಿಗೆ ಮಾತ್ರ ಓಡುವ ಸಮಯ ಹಿಡಿದಿಟ್ಟುಕೊಳ್ಳಲು ಆಗುವುದು. ಹಾಗಾಗಿ ಸವಾಲುಗಳಿಂದ ಕೂಡಿರುವ ಆಧುನಿಕ ಜಗತಿನಲ್ಲಿ ತಂತ್ರಜ್ಞಾನದ ಅಪ್‌ಡೇಟ್ ಮಾಡಿಕೊಳ್ಳುವ ಮೂಲಕ ಛಾಯಾಗ್ರಾಹಕರು ವೃತ್ತಿಯನ್ನು ಗೆಲ್ಲಬೇಕು ಎಂದು ಹೇಳಿದರು.

ಕರ್ನಾಟಕ ಛಾಯಾಗ್ರಾಹಕರ ಸಂಘದ ರಾಜ್ಯಾಧ್ಯಕ್ಷ ಹೆಚ್.ಎಸ್. ನಾಗೇಶ್ ಮಾತಾಡಿ ಛಾಯಾಗ್ರಾಹಕರು ಬದುಕಿದ್ದಾಗಲೇ ಅನುಕೂಲ ಆಗುವಂಥ ಯೋಜನೆಗಳನ್ನು ಸರ್ಕಾರ ರೂಪಿಸಬೇಕು. ಛಾಯಾಗ್ರಾಹಕರಿಗೆ ನಿವೃತ್ತಿ ವೇತನ ಕೊಡಬೇಕು. ಛಾಯಾಗ್ರಾಹಣ ಅಕಾಡೆಮಿ ಶುರು ಮಾಡಬೇಕು ಎನ್ನುವ ಬೇಡಿಕೆ ಮಂಡಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕುಶಾಲನಗರ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ಎಸ್‌ಎಲ್‌ಎನ್ ಸಂಸ್ಥೆಯ ಮುಖ್ಯಸ್ಥ ವಿಶ್ವನಾಥನ್ ಮಾತನಾಡಿದರು. ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆವರ್ತಿ ಆರ್. ಮಹದೇವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಛಾಯಾಗ್ರಾಹಕರ ಸಂಘದ ಕಾರ್ಯದರ್ಶಿ ಮುರಳಿ, ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಕೆ.ಎಸ್. ನಾಗೇಶ್, ಉಪಾಧ್ಯಕ್ಷ ರೋಷನ್, ಉದ್ಯಮಿ ಮಹಮದ್ ಸಾಧಿಕ್ ವೇದಿಕೆಯಲ್ಲಿ ಇದ್ದರು.

ರಂಗಭೂಮಿ, ಕಿರುತೆರೆ ಹಾಗೂ ಚಲನಚಿತ್ರ ಕಲಾವಿದ ಶೀನುಮಿತ್ರ ಅವರನ್ನು ಇದೇ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ಛಾಯಾ ಕುಟುಂಬ ಸಮ್ಮಿಲನ ಅಂಗವಾಗಿ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಸಚಿವ ಕೆ. ವೆಂಕಟೇಶ್ ಬಹುಮಾನಗಳನ್ನು ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net