ಮೊಬೈಲ್‌ನಿಂದ ಛಾಯಾಗ್ರಾಹಕರ ವೃತ್ತಿಗೆ ಸಂಕಷ್ಟ

photo g (1)
ಎನ್.ಆರ್.ಪುರದ ಮಹಾವೀರ ಭವನದಲ್ಲಿ ನಡೆದ 184ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಜೋಬಿಚೆರಿಯನ್ ಹಾಗೂ ಅಜಯ್ ಅವರನ್ನು ಸನ್ಮಾನಿಸಲಾಯಿತು. ಜಯಚಂದ್ರ, ಸಾಜು, ಎಂ.ಒ.ಜೋಯಿ, ಶೆರ್ಲಿವಿಜು, ಮೇಘಗಿರಿ ಇದ್ದರು.
Published on

ಎನ್.ಆರ್.ಪುರ: ಮೊಬೈಲ್‌ಗಳ ಹಾವಳಿಯಿಂದಾಗಿ ಛಾಯಾಗ್ರಾಹಕರ ವೃತ್ತಿಗೆ ಸಂಕಷ್ಟ ಎದುರಾಗಿದೆ ಎಂದು ಜಿಲ್ಲಾ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಜಯಚಂದ್ರ ಕಳವಳ ವ್ಯಕ್ತಪಡಿಸಿದರು.

ಭಾನುವಾರ ಪಟ್ಟಣದ ಮಹಾವೀರ ಭವನದಲ್ಲಿ ಆಯೋಜಿಸಿದ್ದ 184ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ತಾಲೂಕು ಛಾಯಾಗ್ರಾಹಕರ ಸಂಘದ 14ನೇ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಛಾಯಾಗ್ರಾಹಕರು ವೃತ್ತಿಯನ್ನು ಗೌರವಿಸಬೇಕು. ಸಂಘವನ್ನು ಬಲಪಡಿಸಬೇಕು ಎಂದರು.
ಛಾಯಾಗ್ರಾಹಕರ ಸಂಘದಿಂದ ಸೆ.7,8 ಮತ್ತು 9ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ. ವಿವಿಧ ಬಗೆಯ ಕ್ಯಾಮರಾಗಳನ್ನು ಉತ್ಪಾದಿಸುವ ಕಂಪನಿಗಳು ಭಾಗವಹಿಸುತ್ತಿದ್ದು 150 ಸ್ಟಾಲ್‌ಗಳಲ್ಲಿ ವಸ್ತು ಪ್ರದರ್ಶನ ನಡೆಯಲಿದೆ. ಅತ್ಯಾಧುನಿಕ ಕ್ಯಾಮರಾಗಳು, ಹೊಸ ತಂತ್ರಜ್ಞಾನದ ಬಳಕೆ ಮಾಹಿತಿ ಕಾರ್ಯಾಗಾರವನ್ನೂ ಆಯೋಜಿಸಲಾಗಿದೆ ಎಂದರು.
ಜಿಲ್ಲಾ ಛಾಯಾಗ್ರಾಹಕ ಸಂಘದ ಗೌರವಾಧ್ಯಕ್ಷ ಎಂ.ಒ.ಜೋಯಿ ಮಾತನಾಡಿ, 14 ವರ್ಷಗಳ ಹಿಂದೆ ಆರಂಭವಾದ ಛಾಯಾಚಿತ್ರ ಗ್ರಾಹಕರ ಸಂಘ ಪ್ರತಿ ವರ್ಷ ವಾರ್ಷಿಕೋತ್ಸವ ಆಚರಿಸಿಕೊಂಡು ಬಂದಿದೆ ಎಂದು ತಿಳಿಸಿದರು.
ಗುಬ್ಬಿಗಾ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಂಕರ್ ಮಾತನಾಡಿ, ಛಾಯಾಗ್ರಾಹಕರು ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದರು.
ಕೊಪ್ಪ ತಾಲೂಕು ಛಾಯಾಚಿತ್ರ ಗ್ರಾಹಕರ ಸಂಘದ ಅಧ್ಯಕ್ಷ ಸಂದೀಪ್ ಮಾತನಾಡಿ, ಆ.29ರಂದು ಕೊಪ್ಪದಲ್ಲಿ ಛಾಯಾಚಿತ್ರಗ್ರಹಣದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಹಾಗೂ ಫೋಟೋಗ್ರಾಫಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.
ಛಾಯಾಚಿತ್ರಗ್ರಾಹಕರ ಸಂಘದ ಸದಸ್ಯರ ಮಕ್ಕಳಿಗೆ ಪಿ.ಸದಾಶಿವ ಮತ್ತು ಸುಕುಮಾರ್ ನೀಡಿದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕ್ರಿಯಾಶೀಲ ವಿಡಿಯೋಗ್ರಾಫರ್ ಎಂದು ಜೋಬಿಚೆರಿಯನ್ ಹಾಗೂ ಕ್ರಿಯಾಶೀಲ ಪೋಟೋಗ್ರಾಫರ್ ಎಂದು ಅರ್ಜುನ್ ಅವರನ್ನು ಪುರಸ್ಕರಿಸಲಾಯಿತು.
ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ಎಂ.ಕೆ.ಸಾಜು, ಶಿವಮೊಗ್ಗ ಪದ್ಮಶ್ರೀ ಕಲರ್ ಲ್ಯಾಬ್‌ನ ಸತೀಶ್, ಜಿಲ್ಲಾ ಛಾಯಾಚಿತ್ರಗ್ರಾಹಕರ ಸಂಘದ ಖಜಾಂಚಿ ಬಾಲಣ್ಣ, ಸಂಘದ ಶಿವಶಂಕರ್, ವಿಜು, ಅಭಿನವ ಗಿರಿರಾಜ್, ಅರ್ಜುನ್, ಸಮೀರ್, ಗಿರಿರಾಜ್, ಮೇಘಗಿರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net