

ಎಚ್.ಡಿ.ಕೋಟೆ: ತಾಲೂಕು ಛಾಯಾಗ್ರಾಹಕ ಸಂಘವು ರಾಜ್ಯದಲ್ಲಿ ಮಾದರಿಯಾದ ಸಂಘವಾಗಿದೆ ಎಂದು ಶಾಸಕ ಅನಿಲ್ ಕುಮಾರ್ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ತಾಲೂಕು ಛಾಯಾಗ್ರಾಹಕ ಸಂಘದ ವತಿಯಿಂದ ಬುಧವಾರ ಆಯೋಜಿಸಿದ್ದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಛಾಯಾಚಿತ್ರದ ಮೂಲಕ ಹಿಂದಿನ ನೆನಪನ್ನು ಮರುಕಳಿಸುವಂತೆ ಮಾಡುವ ಕೆಲಸವನ್ನು ಛಾಯಾಗ್ರಾಹಕರು ಮಾಡುತ್ತಿದ್ದಾರೆ ಎಂದರು.
2019-20ರಲ್ಲಿ ಕೋವಿಡ್ ಇದ್ದ ಸಂದರ್ಭದಲ್ಲಿ 2 ವರ್ಷಗಳ ಕಾಲ ಯಾವುದೇ ಕಾರ್ಯಗಳಿಲ್ಲದೆ ಛಾಯಾಗ್ರಹಕರು ಕಷ್ಟಕರ ಜೀವನ ನಡೆಸಿದರು. ಅಂತಹ ಸಂದರ್ಭದಲ್ಲಿಯೂ ಕೂಡ ತಾಲೂಕು ಛಾಯಾಗ್ರಹಕರ ಸಂಘವು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.
ಡಿಸೆಂಬರ್ ತಿಂಗಳಲ್ಲಿ ಜಂಗಲ್ ಲಾಡ್ಜ್ ರೆಸಾರ್ಟ್ ವತಿಯಿಂದ ರಾಜ್ಯ ಮಟ್ಟದ ವಿಶ್ವ ಪ್ರಾಣಿ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಅಲ್ಲಿಗೆ ತಾಲೂಕಿನ ಛಾಯಾಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ತಾಲೂಕು ಛಾಯಾಗ್ರಹಕರ ಸಂಘಕ್ಕೆ ಸಿಎ ನಿವೇಶನವನ್ನು ನೀಡಿದ್ದು, ಇತಿಹಾಸ ನೆನಪಿಸುವ ಉತ್ತಮ ಭವನ ನಿರ್ಮಾಣ ಮಾಡಲು ಅಗತ್ಯವಾದ ಸಹಕಾರವನ್ನು ಒದಗಿಸಲಾಗುತ್ತದೆ ಎಂದ ಶಾಸಕರು, ಸಿಎ ನಿವೇಶನಕ್ಕೆ ಸರ್ಕಾರಕ್ಕೆ ಕಟ್ಟುವ ಹಣವನ್ನು ನಾನು ಕಟ್ಟುತ್ತೇನೆ ಎಂದು ಭರವಸೆ ನೀಡಿದರು.
ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ಕಲೆ, ತಂತ್ರಜ್ಞಾನ ಹಾಗೂ ವಿಜ್ಞಾನದ ಮಹತ್ವವನ್ನು ಛಾಯಾಗ್ರಾಹಕರು ತಿಳಿಸಿಕೊಡಲಿದ್ದಾರೆ. ಕೆಲವು ಸಂದರ್ಭಗಳಲ್ಲಿ ಪದಗಳಲ್ಲಿ ತಿಳಿದುಕೊಳ್ಳಲು ಆಗುವುದಿಲ್ಲ, ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಆದರೆ ಛಾಯಾಗ್ರಹಕರು ಸನ್ನಿವೇಶದ ಚಿತ್ರದ ಮೂಲಕ ಕಟ್ಟಿಕೊಡುವ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಛಾಯಾಗ್ರಾಹಕರನ್ನು ಗೌರವಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಛಾಯಾಗ್ರಹಕರ ಪ್ರತಿಭಾನ್ವಿತ ಮಕ್ಕಳನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡೆಯಲ್ಲಿ ಸ್ಪರ್ಧಿಸಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರವಿಕುಮಾರ್ ಆರಾಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಶಿವಮ್ಮ ಚಾಕಹಳ್ಳಿ ಕೃಷ್ಣ, ತಹಸೀಲ್ದಾರ್ ಶ್ರೀನಿವಾಸ್, ಡಾ.ಎಂ.ಡಿ ನಾಗೇಂದ್ರ, ಹೈರಿಗೆ ಶಿವರಾಜು, ಪರಮೇಶ್, ವಿಜಯ್, ರಾಮಸ್ವಾಮಿ, ನಿಂಗರಾಜು, ನರೇಂದ್ರ, ಸತೀಶ್ ಆರಾಧ್ಯ, ವನಸಿರಿ ಶಂಕರ್, ತ್ರಿಶಂಭು, ಮಾದೇವಸ್ವಾಮಿ, ಸೋಮಸುಂದರ್, ಭರಣಿ ಮಹೇಶ್, ಸೋಮೇಶ್, ಕನ್ನಡ ಪ್ರಮೋದ್, ಮೋಹನ್, ಕಾಶಿ ಮಹೇಶ್, ಸ್ವಾಮಿ ನಾಯಕ್ ಇತರರು ಇದ್ದರು.