

ತುಮಕೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪಠ್ಯ ಪುನರ್ಮನನಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಕಳೆದ ತಿಂಗಳಷ್ಟೇ ಫೋನ್‌ಇನ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು ಫೋನ್‌ಔಟ್ ಎಂಬ ವಿನೂತನ ಕಾರ್ಯಕ್ರಮವನ್ನು ಆರಂಭಿಸಿದೆ.
ಲಾಕ್‌ಡೌನ್ ಅವಧಿಯಲ್ಲಿ ಪಠ್ಯವನ್ನು ಮರೆಯದೆ ಮಕ್ಕಳು ಪರೀಕ್ಷೆಯನ್ನು ಉತ್ತಮವಾಗಿ ಬರೆಯಬೇಕೆನ್ನುವುದು ಫೋನ್‌ಔಟ್ ಉದ್ದೇಶ. ಗ್ರಾಮೀಣ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿ ದಿನ ನುರಿತ ಸಂಪನ್ಮೂಲ ಶಿಕ್ಷಕರು ಹಾಗೂ ವಿಷಯ ಪರಿವೀಕ್ಷಕರ ತಂಡವು ವಿದ್ಯಾರ್ಥಿಗಳಿಗೆ ಕರೆ ಮಾಡುವ ಮೂಲಕ ಪರೀಕ್ಷಾ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಲಿದೆ.
ಪ್ರಸ್ತುತ ಉಚಿತ ಕರೆ ಸೌಲಭ್ಯವಿರುವುದರಿಂದ ಶಿಕ್ಷಕರು ವೈಯಕ್ತಿಕ ಮೊಬೈಲ್‌ನಿಂದಲೇ ವಿದ್ಯಾರ್ಥಿಗಳಿಗೆ ಕರೆ ಮಾಡಲು ಶಿಕ್ಷಣ ಇಲಾಖೆ ಮನವಿ ಮಾಡಿದೆ. ಪ್ರತಿನಿತ್ಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಗುತ್ತಿದೆ.
ವಿಷಯವಾರು ಕ್ಲಿಷ್ಟ ಪರಿಕಲ್ಪನೆಗಳ ಬಗ್ಗೆ ಶಿಕ್ಷಕರು ಮಾರ್ಗದರ್ಶನ ನೀಡುತ್ತಿದ್ದಾರೆ. ಮಕ್ಕಳು ನೇರವಾಗಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳುತ್ತಿದ್ದಾರೆ. ತುಮಕೂರಿನಲ್ಲೇ ವಾಸಿಸುವ ಶಿಕ್ಷಕರನ್ನು ಈ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಸುಮಾರು 200 ಶಿಕ್ಷಕರು ಈ ಕಾರ‌್ಯದಲ್ಲಿ ತೊಡಗಿದ್ದಾರೆ. ಗಣಿತ, ಕನ್ನಡ, ವಿಜ್ಞಾನ, ಸಮಾಜ, ಹಿಂದಿ, ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿ ಪರಿಹರಿಸಿಕೊಳ್ಳಬಹುದು.