ವಿದ್ಯಾರ್ಥಿಗಳಿಗೆ ಪಠ್ಯ ಪುನರ್ಮನನಕ್ಕೆ ಫೋನ್‌ಔಟ್ ಕಾರ್ಯಕ್ರಮ

schoolership
Published on

ತುಮಕೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪಠ್ಯ ಪುನರ್ಮನನಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಕಳೆದ ತಿಂಗಳಷ್ಟೇ ಫೋನ್‌ಇನ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟು ಫೋನ್‌ಔಟ್ ಎಂಬ ವಿನೂತನ ಕಾರ್ಯಕ್ರಮವನ್ನು ಮೇ 12ರಂದು ಆರಂಭಿಸಿದೆ.

ಲಾಕ್‌ಡೌನ್ ಅವಧಿಯಲ್ಲಿ ಪಠ್ಯವನ್ನು ಮರೆಯದೆ ಮಕ್ಕಳು ಪರೀಕ್ಷೆಯನ್ನು ಉತ್ತಮವಾಗಿ ಬರೆಯಬೇಕೆನ್ನುವುದು ಫೋನ್‌ಔಟ್ ಉದ್ದೇಶ. ಗ್ರಾಮೀಣ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿ ದಿನ ನುರಿತ ಸಂಪನ್ಮೂಲ ಶಿಕ್ಷಕರು ಹಾಗೂ ವಿಷಯ ಪರಿವೀಕ್ಷಕರ ತಂಡವು ವಿದ್ಯಾರ್ಥಿಗಳಿಗೆ ಕರೆ ಮಾಡುವ ಮೂಲಕ ಪರೀಕ್ಷಾ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ನೀಡಲಿದೆ. ಪ್ರಸ್ತುತ ಉಚಿತ ಕರೆ ಸೌಲಭ್ಯವಿರುವುದರಿಂದ ಶಿಕ್ಷಕರು ವೈಯಕ್ತಿಕ ಮೊಬೈಲ್‌ನಿಂದಲೇ ವಿದ್ಯಾರ್ಥಿಗಳಿಗೆ ಕರೆ ಮಾಡಲು ಮನವಿ ಮಾಡಲಾಗಿದೆ.

200 ವಿದ್ಯಾರ್ಥಿಗಳೊಂದಿಗೆ ಸಂವಾದ: ಫೋನ್‌ಔಟ್ ಕಾರ್ಯಕ್ರಮವು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ನಡೆಯುತ್ತಿದ್ದು, ಪ್ರತಿನಿತ್ಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ವಿಷಯಗಳ ಪುನರ್ಮನನದೊಂದಿಗೆ ಸಂವಾದ ನಡೆಸಲಾಗುತ್ತಿದೆ. ವಿಷಯವಾರು ಕ್ಲಿಷ್ಟ ಪರಿಕಲ್ಪನೆಗಳ ಬಗ್ಗೆ ಶಿಕ್ಷಕರು ಮಾರ್ಗದರ್ಶನ ನೀಡಲಿದ್ದಾರೆ. ಮಕ್ಕಳು ನೇರವಾಗಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳುತ್ತಿದ್ದಾರೆ. ತುಮಕೂರಿನಲ್ಲೇ ವಾಸಿಸುವ ಶಿಕ್ಷಕರನ್ನೇ ಈ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸುಮಾರು 200 ಶಿಕ್ಷಕರನ್ನು ತೊಡಗಿಸಿಕೊಳ್ಳಲಾಗುತ್ತಿದೆ. ಗಣಿತ, ಕನ್ನಡ, ವಿಜ್ಞಾನ, ಸಮಾಜ, ಹಿಂದಿ, ಇಂಗ್ಲಿಷ್ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿ ಪರಿಹರಿಸಿಕೊಳ್ಳಬಹುದು. ಪರೀಕ್ಷಾ ಮಂಡಳಿಯಿಂದ ಮುಂದಿನ ವಾರ ವೇಳಾಪಟ್ಟಿ ಪ್ರಕಟವಾಗಿ ಜೂನ್‌ಗೆ ಪರೀಕ್ಷೆ ನಡೆವ ಸಾಧ್ಯತೆಯಿದೆ.

ಪರೀಕ್ಷೆ ಬರೆಯಲು ಸಿದ್ಧರಾಗಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದರಿಸಲು ಸಿದ್ಧರಾಗಬೇಕು. ಕಳೆದ 9 ತಿಂಗಳಲ್ಲಿ ಶಾಲೆಯಲ್ಲಿ ಕಲಿತ ಪಾಠವನ್ನು ಪುನರ್ಮನನ ಮಾಡಿಕೊಂಡು ಪರೀಕ್ಷೆಗೆ ತಯಾರಾಗಬೇಕು. ವೇಳಾಪಟ್ಟಿ ಪ್ರಕಟವಾಗುವ ಮುನ್ನ ಸಮಯ ಸದ್ಭಳಕೆ ಮಾಡಿಕೊಳ್ಳಲು ಮಾನಸಿಕವಾಗಿ ಸಿದ್ಧತೆ ಮಾಡಿಕೊಳ್ಳಿ. ಅನುಮಾನಗಳಿದ್ದರೆ ಶಿಕ್ಷಕರನ್ನು ಸಂಪರ್ಕಿಸಿ ಅವರಿಂದ ಬಗೆಹರಿಸಿಕೊಳ್ಳಬೇಕು. ಪಾಲಕರು ಮಕ್ಕಳಿಗೆ ಪರೀಕ್ಷಾ ತಯಾರಿಗೆ ನೆರವಾಗುವಂತೆ ಜಿಪಂ ಸಿಇಒ ಶುಭಕಲ್ಯಾಣ್ ತಿಳಿಸಿದ್ದಾರೆ.

ವಾಟ್ಸ್‌ಆ್ಯಪ್‌ನಲ್ಲಿ ಪ್ರಶ್ನೋತ್ತರ: ಕೆಲವೊಮ್ಮೆ ಪಾಲಕರು ಮನೆಯಿಂದ ಹೊರಗಡೆ ಇದ್ದ ಸಂದರ್ಭಗಳಲ್ಲಿ ನೇರವಾಗಿ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಸಂಪರ್ಕ ಸಾಧಿಸಲು ಅಸಾಧ್ಯವಾದಾಗ ಪಾಲಕರು ಮನೆಗೆ ಬಂದಾಗ ಸಂಬಂಧಿಸಿದ ಶಿಕ್ಷಕರ ಮೊಬೈಲ್ ಸಂಖ್ಯೆಗೆ ವಿದ್ಯಾರ್ಥಿಗಳು ಕರೆ ಮಾಡಿ ಸಂವಾದ ನಡೆಸಲು ಅವಕಾಶವಿದೆ. ಆಯಾ ಶಾಲಾ ಶಿಕ್ಷಕರೂ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದು, ವಾಟ್ಸ್‌ಆ್ಯಪ್ ಮೂಲಕ ಪ್ರಶ್ನೋತ್ತರಗಳ ವಿನಿಮಯ ನಡೆಸುತ್ತಿದ್ದಾರೆ.

21 ಸಾವಿರ ವಿದ್ಯಾರ್ಥಿಗಳ ನೋಂದಣಿ ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 21 ಸಾವಿರ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಕನ್ನಡವಷ್ಟೇ ಅಲ್ಲದೆ, ಆಂಗ್ಲ ಮಾಧ್ಯಮದಲ್ಲೂ ಪುನರ್ಮನನ ಮಾಡುವ ಉದ್ದೇಶ ಹೊಂದಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net