

ಹುಬ್ಬಳ್ಳಿ : ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಪರಿಹರಿಸುವ ಉದ್ದೇಶದಿಂದ ಮಹಾಪೌರ ರಾಮಪ್ಪ ಬಡಿಗೇರ ಅವರು ಪಾಲಿಕೆ ಅಧಿಕಾರಿಗಳೊಂದಿಗೆ ಸೇರಿ ಪ್ರತಿ ತಿಂಗಳ ಮೊದಲ ಬುಧವಾರ ಫೋನ್ ಇನ್ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಹಾಪೌರ ರಾಮಣ್ಣ ಬಡಿಗೇರ, ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು ‘ಮೊಬೈಲ್ ಸಂಖ್ಯೆ 82778 02331’ಗೆ ಕರೆ ಮಾಡಿ ಸಮಸ್ಯೆ ಹೇಳಿದರೆ, 15 ದಿನಗಳೊಳಗೆ ಸಮಸ್ಯೆಗಳನ್ನು ನಿವಾರಿಸಲಾಗುವುದು ಎಂದು ತಿಳಿಸಿದರು.
ಪ್ರತಿ ತಿಂಗಳ ಮೊದಲ ಬುಧವಾರ ಬೆಳಗ್ಗೆ 11 ರಿಂದ 12 ಗಂಟೆಯವರೆಗೆ ಪೋನ್ ಇನ್ ಕಾರ್ಯಕ್ರಮ ನಡೆಸಲು ತೀರ್ಮಾನಿಸಿಲಾಗಿದ್ದು, ಸಮಯ ವಿಸ್ತರಿಸುವ ಬಗ್ಗೆ ಚಿಂತಿಸಲಾಗುವುದು. ಜ. 22ರಂದು ಪೋನ್ ಇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
ಈಗಾಗಲೇ ಕಾರ್ಯದಲ್ಲಿರುವ ಪಾಲಿಕೆ ಕಂಟ್ರೋಲ್ ರೂಮ್ ಗೆ ಜನರು ಎಂದಿನಂತೆ ಕರೆ ಮಾಡಿ, ಸಮಸ್ಯೆ ದಾಖಲಿಸಬಹುದು. ಕಂಟ್ರೋಲ್ ರೂಮ್ ಸಹ ಎಂದಿನಂತೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.
ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿ ಹೇಳುವ ಸಮಸ್ಯೆಗಳನ್ನು ನಿಗದಿತ ಸಮಯದೊಳಗೆ ಬಗೆ ಹರಿಸದೇ ಇದ್ದರೆ ಸಂಬಂಧಿಸಿದ ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಫೋನ್ ಇನ್ ಕಾರ್ಯಕ್ರಮದಲ್ಲಿ ತಮ್ಮೊಂದಿಗೆ ಪಾಲಿಕೆ ಆಯುಕ್ತರ, ವಲಯ ಕಚೇರಿಗಳ ಸಹಾಯಕ ಆಯುಕ್ತರು, ಹೆಲ್ತ್ ಇನಸ್ಪೆಕ್ಟರ್ಗಳು, ತೆರಿಗೆ ಅಧಿಕಾರಿಗಳು ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಹಾಜರಿರುತ್ತಾರೆ ಎಂದು ತಿಳಿಸಿದರು.
26 ಕೋಟಿ ರೂ. ಪ್ರಾಪರ್ಟಿ ಟ್ಯಾಕ್ಸ್ ಬಾಕಿ ಇದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ ಮಹಾಪೌರ ರಾಮಪ್ಪ ಬಡಿಗೇರ, ಪ್ರತಿ ಮನೆಯಿಂದ ತೆರಿಗೆ ಸಂಗ್ರಹಕ್ಕಾಗಿ ಪಾಲಿಕೆ ಸಿಬ್ಬಂದಿಗೆ 78 ಮಷಿನ್ಗಳನ್ನು ನೀಡಲಾಗಿದೆ. ಅವರು ಪ್ರತಿ ಮನೆಗೆ ಭೇಟಿ ನೀಡಿ ತೆರಿಗೆ ಸಂಗ್ರಹಿಸುತ್ತಾರೆ ಎಂದು ತಿಳಿಸಿದರು.
ಬಾಕಿ ತೆರಿಗೆ ಹಾಗೂ ನೀರಿನ ಕರವನ್ನು ಒನ್ ಟೈಮ್ ಸೆಟ್ಲಮೆಂಟ್ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಅವರ ಬಳಿ ಪಾಲಿಕೆ ಸರ್ವಪಕ್ಷ ಸದಸ್ಯರ ನಿಯೋಗದೊಂದಿಗೆ ಭೇಟಿ ನೀಡಲಾಗುವುದು. ಇದರೊಂದಿಗೆ ಬಾಕಿ ಪಿಂಚಣಿ 58 ಕೋಟಿ ರೂ. ಸೇರಿದಂತೆ ಪಾಲಿಕೆಗೆ ಸರ್ಕಾರದಿಂದ ವಿವಿಧ ಮೂಲಗಳಿಂದ ಬರಬೇಕಿರುವ 300 ಕೋಟಿ ರೂ. ಬಿಡುಗಡೆಗೊಳಿಸುವಂತೆಯೂ ಮನವಿ ಮಾಡಲಾಗುವುದು ಎಂದು ಹೇಳಿದರು.
ಪಾಲಿಕೆ ಸಭಾನಾಯಕ ವೀರಣ್ಣ ಸವಡಿ ಮಾತನಾಡಿ, ಪಾಲಿಕೆ ವ್ಯಾಪ್ತಿಯ ಆಸ್ತಿಗಳನ್ನು ಜಿಐಎಸ್ ಸರ್ವೆ ನಡೆಸಲು ಟೆಂಡರ್ ಕರೆಯಲಾಗಿದ್ದು, ಮಂಗಳವಾರದಂದು ಟೆಂಡರ್ ಓಪನ್ ಮಾಡಲಾಗುತ್ತಿದೆ. ಸಧ್ಯ ಪ್ರತಿ ವರ್ಷ ಪಾಲಿಕೆಗೆ ಅಂದಾಜು 120 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗುತ್ತಿದ್ದು, ಜಿಐಎಸ್ ಸರ್ವೆಯಿಂದ 350 ರಿಂದ 400 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾತನಾಡಿ, ನವೀಕೃತ ಜನತಾ ಬಜಾರ ಕಟ್ಟಡದಲ್ಲಿ 122 ಕಟ್ಟಾಗಳನ್ನು ನಿರ್ವಿುಸಲಾಗಿದೆ. ಈ ಮೊದಲು 177 ಕಟ್ಟಾಗಳಿದ್ದವು. ಇದೀಗ, 122 ಕಟ್ಟಾಗಳನ್ನು ಹಸ್ತಾಂತರ ಮಾಡಿ, ಬಾಕಿ ಉಳಿದ ಕಟ್ಟಾಗಳನ್ನು ನಿರ್ವಿುಸಲಾಗುವುದು. 77 ಅಂಗಡಿಗಳನ್ನು ಹರಾಜಿನ ಮೂಲಕ ಹಸ್ತಾಂತರಿಸಲಾಗುವುದು ಎಂದರು.
ಉಪ ಮಹಾಪೌರರಾದ ದುರ್ಗಮ್ಮ ಬಿಜವಾಡ ಹಾಜರಿದ್ದರು.