

ಬೆಳಗಾವಿ: ಕೆಎಲ್‌ಇ ವೇಣುಧ್ವನಿ 90.4 ಎಫ್.ಎಂ. ಸಮುದಾಯ ಬಾನುಲಿ ಕೇಂದ್ರ ಬೆಳಗಾವಿ ಮತ್ತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸಹಯೋಗದಲ್ಲಿ ಶುಕ್ರವಾರ ನೇರ ಫೋನ್‌ಇನ್ ಕಾರ್ಯಕ್ರಮ ಜರುಗಿತು.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಕಾರ್ಯಚಟುವಟಿಕೆಗಳು ಮತ್ತು ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷೆ ಕುರಿತು ಪ್ರಶ್ನೋತ್ತರ ಮೂಲಕ ಜನಜಾಗೃತಿ ಮೂಡಿಸಲಾಯಿತು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಇಲಾಖೆಯ ಜಿಲ್ಲಾ ಅಂಕಿತ ಅಧಿಕಾರಿ, ಮುಖ್ಯಸ್ಥ ಡಾ.ಜಗದೀಶ ಜಿಂಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಲಾಖೆ ಕಾರ್ಯ ಚಟುವಟಿಕೆಗಳು, ಹೋಟೆಲ್ ನೋಂದಣಿ ಪ್ರಕ್ರಿಯೆ, ಹೋಟೆಲ್ ಪರವಾನಗಿ, ಅಗತ್ಯ ದಾಖಲೆಗಳು, ಆಹಾರ ಪದಾರ್ಥಗಳ ಸುರಕ್ಷತೆ ಮತ್ತು ಗುಣಮಟ್ಟ ಪರೀಕ್ಷೆ ಕುರಿತು ಮಾಹಿತಿ ಹಂಚಿಕೊಂಡರು. ಹೋಟೆಲ್ ಮತ್ತು ರಸ್ತೆ ಬದಿ ತಿಂಡಿ-ತಿನಿಸು ಅಂಗಡಿಯವರು ಅಡುಗೆ ತಯಾರಿಸುವ ಸ್ಥಳದಲ್ಲಿ ಯಾವ ರೀತಿ ಸ್ವಚ್ಛತೆ ಕಾಯ್ದುಕೊಳ್ಳಬೇಕು? ಗ್ರಾಹಕರು ಆಹಾರ ಪದಾರ್ಥಗಳಲ್ಲಿನ ಗುಣಮಟ್ಟದ ಬಗ್ಗೆ ಅನುಮಾನ ಕಂಡುಬಂದಲ್ಲಿ ದೂರು ನೀಡುವ ಕುರಿತು ಹಾಗೂ ಆಹಾರ ಉದ್ದಿಮೆದಾರರಿಗೆ ಆಹಾರ ಸುರಕ್ಷತೆ, ಗುಣಮಟ್ಟ ಕುರಿತು ತರಬೇತಿ ನೀಡುವ ಮಾಹಿತಿ ನೀಡಿದರು. ಕೇಳುಗರ ಪ್ರಶ್ನೆಗಳಿಗೂ ಉತ್ತರಿಸಿದರು. ವೇಣುಧ್ವನಿ ಕಾರ್ಯಕ್ರಮ ನಿರ್ವಾಹಕಿ ಮನಿಷಾ ಪಿ. ಎಸ್. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.