ಉತ್ತರ ಪಾಲಿಕೆ ಆಯುಕ್ತರಿಂದ ಫೋನ್ ಇನ್: ರಸ್ತೆಗುಂಡಿ ಸಮಸ್ಯೆ ಬಗ್ಗೆ ದೂರು

phone in
Published on

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಪಂಚ ಪಾಲಿಕೆಗಳು ಅಸ್ತಿತ್ವಕ್ಕೆ ಬಂದ ನಂತರ ಇದೇ ಮೊದಲ ಬಾರಿಗೆ ಉತ್ತರ ಕಾರ್ಪೋರೇಷನ್‌ನಿಂದ ಜನರ ಅಹವಾಲು ಆಲಿಕೆಗೆ ಫೋನ್ ಇನ್ ಕಾರ್ಯಕ್ರಮ ನಡೆಸಿ ದೂರುಗಳನ್ನು ಸ್ವೀಕರಿಸಿ ಪರಿಹಾರ ಒದಗಿಸುವ ಭರವಸೆ ನೀಡಲಾಯಿತು.

ಬ್ಯಾಟರಾಯನಪುರದಲ್ಲಿರುವ ಉತ್ತರ ಪಾಲಿಕೆಯ ನಿಯಂತ್ರಣ ಕೊಠಡಿಯಲ್ಲಿ ಆಯುಕ್ತ ಪಿ. ಸುನೀಲ್ ಕುಮಾರ್ ಶುಕ್ರವಾರ ಫೋನ್ ಇನ್‌ನಲ್ಲಿ ಪಾಲ್ಗೊಂಡರು. ಕಾರ್ಪೋರೇಷನ್‌ನ ವಿವಿಧ ಭಾಗಗಳಿಂದ ಜನರು ದೂರುಗಳನ್ನು ದಾಖಲಿಸಿ ತ್ವರಿತ ಸಮಯದೊಳಗೆ ಪರಿಹರಿಸುವಂತೆ ಮನವಿ ಮಾಡಿದರು. ಹೆಚ್ಚಿನ ಮಂದಿ ರಸ್ತೆಗುಂಡಿಗಳ ಬಗ್ಗೆ ಹೆಚ್ಚಾಗಿ ದೂರು ನೀಡಿದರು. ನಾಗರಿಕರು ಕಸ ವಿಲೇವಾರಿ, ಬೀದಿದೀಪ, ಬೀದಿನಾಯಿ, ಚರಂಡಿಗಳಲ್ಲಿ ಹೂಳೆತ್ತುವಿಕೆ ವಿಷಯಗಳ ಬಗ್ಗೆ ಅಹವಾಲು ದಾಖಲಿಸಿದರು.

ರಸ್ತೆಗುಂಡಿ ಮುಚ್ಚಲು ಸೂಚನೆ:

ಫೋನ್ ಇನ್ ವೇಳೆ ಬಂದಂತಹ ದೂರುಗಳನ್ನು ಆಧರಿಸಿ ಆಯಾ ಪ್ರದೇಶಗಳಲ್ಲಿನ ರಸ್ತೆಗುಂಡಿಗಳನ್ನು ಮುಚ್ಚಲು ತಕ್ಷಣವೇ ಕ್ರಮ ಕೈಗೊಳ್ಳಬೇಕು. ಗುಂಡಿ ಮುಚ್ಚಲು ಜತೆಗೆ ರಸ್ತೆ ದುರಸ್ತಿಗೂ ಮುತುವರ್ಜಿ ವಹಿಸುವಂತೆ ಆಯುಕ್ತರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಕೆಲವೆಡೆ ಅಸಮರ್ಪಕ ತ್ಯಾಜ್ಯ ನಿರ್ವಹಣೆ ಕುರಿತು ದೂರುಗಳು ಬಂದಿವೆ. ಬೀದಿ ದೀಪಗಳ ನಿರ್ವಹಣೆಯಲ್ಲಿ ಸಮಸ್ಯೆಗಳು ಜನರು ಹೇಳಿಕೊಂಡರು. ಈ ರೀತಿ ಸ್ವೀಕರಿಸಲಾದ ದೂರುಗಳಿಗೆ ತಕ್ಷಣವೇ ಸ್ಪಂದಿಸಿ ಸಾರ್ವಜನಿಕರಿಗೆ ಪರಿಹಾರ ಒದಗಿಸುವಂತೆ ಆಯುಕ್ತರು ಎಲ್ಲ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮುಂದಿನ ಶುಕ್ರವಾರವೂ ಫೋನ್ ಇನ್ ನಡೆಸಲಾಗುವುದು ಎಂದು ಆಯುಕ್ತ ಸುನೀಲ್ ಕುಮಾರ್ ತಿಳಿಸಿದ್ದಾರೆ.

64 ಅಹವಾಲು ಸ್ವೀಕಾರ:

ಮೊದಲ ಫೋನ್ ಇನ್ ವೇಳೆ ಸಾರ್ವಜನಿಕರಿಂದ 41 ಕರೆಗಳನ್ನು ಸ್ವೀಕರಿಸಲಾಯಿತು. ಜತೆಗೆ ಕೆಲ ಮಂದಿ ದೂರು ನೀಡಿದ್ದು, ಒಟ್ಟಾರೆ 64 ಅಹವಾಲುಗಳನ್ನು ಸ್ವೀಕರಿಸಲಾಯಿತು. ಇವುಗಳನ್ನು ಸಹಾಯ ಪೋರ್ಟಲ್ನಲ್ಲಿ ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿ ಸೂಕ್ತ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಆಯುಕ್ತರು ಪ್ರತಿಕ್ರಿಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net