ಪಿಎಚ್.ಡಿ ಮಹಾಪ್ರಬಂಧಗಳು ಎಲ್ ಬೋರ್ಡ್ ವಾಹನಗಳಂತೆ

mysore
Published on

ಮೈಸೂರು: ಇತ್ತೀಚಿನ ಪಿಎಚ್.ಡಿ ಮಹಾಪ್ರಬಂಧಗಳು ಎಲ್ ಬೋರ್ಡ್ ವಾಹನಗಳಂತಾಗಿವೆ ಎಂದು ಕವಿ, ಚಿಂತಕ ಪ್ರೊ.ಅರವಿಂದ ಮಾಲಗತ್ತಿ ಕಳವಳ ವ್ಯಕ್ತಪಡಿಸಿದರು.


ಸಾಹಿತ್ಯ ಅಕಾಡೆಮಿ ವತಿಯಿಂದ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ‘ಕನ್ನಡ ಸಾಹಿತ್ಯ ಸಂಶೋಧನೆಯ ವಿವಿಧ ಆಯಾಮಗಳು’ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮದಲ್ಲಿ ಸಮಾರೋಪ ಭಾಷಣ ಮಾಡಿದರು.


ಈಗಿನ ಮಹಾಪ್ರಬಂಧಗಳು ಗುಣಮಟ್ಟ ಕೊರತೆಯಿಂದ ಕೂಡಿರುತ್ತವೆ. ಅನೇಕ ಸೌಲಭ್ಯಗಳು ಲಭ್ಯವಿದ್ದರೂ ಮೌಲ್ಯಯುತ ಪ್ರಬಂಧಗಳು ಬರುತ್ತಿಲ್ಲ ಎಂದರು.
ಪ್ರಸ್ತುತ ಸಂಶೋಧನಾ ವಿದ್ಯಾರ್ಥಿಗಳು ಭಾಗ್ಯವಂತರು.

ಹಿಂದಿನಷ್ಟು ಕಷ್ಟಗಳು-ಸವಾಲುಗಳಿಲ್ಲ. ಕಂಪ್ಯೂಟರ್, ಅಂತರ್ಜಾಲ, ಸಾಮಾಜಿಕ ಜಾಲತಾಣ… ಹೀಗೆ ಅನೇಕ ಸೌಲಭ್ಯಗಳು ಸುಲಭವಾಗಿ ದೊರೆಯುತ್ತವೆ. ಆದ್ದರಿಂದ ಹಿಂದಿನ ಸಂಶೋಧನೆಯನ್ನು ಮೀರುವಂತಹ ಸಂಶೋಧನೆ ಹೊರಹೊಮ್ಮಬೇಕಿದೆ. ಆದರೆ, ಅನೇಕ ಅವಕಾಶಗಳಿದ್ದರೂ ಅದು ಆಗುತ್ತಿಲ್ಲ ಎಂದರು.


ಪಿಎಚ್.ಡಿ ಮಹಾಪ್ರಬಂಧ ಗುಣಮಟ್ಟ ಕೊರತೆಗೆ ಕೇವಲ ಸಂಶೋಧನಾ ವಿದ್ಯಾರ್ಥಿಯೊಬ್ಬರೇ ಕಾರಣರಲ್ಲ. ಆಡಳಿತ ವ್ಯವಸ್ಥೆ, ಮಾರ್ಗದರ್ಶಕರು ಇದರಲ್ಲಿ ಭಾಗಿದಾರರು ಎಂದರು.


ಸಮಾಜಮುಖಿ ಆಗದ ಮಹಾಪ್ರಬಂಧ ಇದ್ದರೂ ಅಷ್ಟೇ, ಇಲ್ಲದಿದ್ದರೂ ಅಷ್ಟೇ. ಅದರಿಂದ ಏನೂ ಪ್ರಯೋಜನವಾಗಲ್ಲ. ಹೀಗಾಗಿ, ಪ್ರತಿ ಸಂಶೋಧನೆಯೂ ಸಮಾಜಮುಖಿ ಆಗಿರಬೇಕು. ವರ್ತಮಾನ ಸಮಾಜಕ್ಕೆ ಕೊಡುಗೆ ನೀಡಬೇಕು. ಹೊಸ ಬದಲಾವಣೆಗೆ ಮುನ್ನುಡಿ ಬರೆಯಬೇಕು. ಕೆಲ ಸಲಹೆ-ಸೂಚನೆಯನ್ನೂ ನೀಡಬೇಕು ಎಂದು ಸಲಹೆ ನೀಡಿದರು.


ಬಹಳಷ್ಟು ಮಹಾಪ್ರಬಂಧಗಳಲ್ಲಿ ಅಧ್ಯಯನ ವಿಧಿವಿಧಾನ, ಸಂಶೋಧನೆಯ ಮಾನದಂಡಗಳೇ ಇರಲ್ಲ. ಪ್ರಬಂಧ ಆರಂಭ ಮತ್ತು ಅಂತ್ಯ ಬಹಳ ಶಕ್ತಿಯುತವಾಗಿ ಮತ್ತು ಗಟ್ಟಿಯಾಗಬೇಕು. ಆದರೆ, ಬಹಳಷ್ಟು ಸಂಶೋಧಕರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲ್ಲ. ಇದನ್ನು ಲಘುವಾಗಿ ತೆಗೆದುಕೊಳ್ಳುವುದರಿಂದ ಇಡೀ ಸಂಶೋಧನೆಯೇ ದುರ್ಬಲವಾಗುತ್ತದೆ ಎಂದು ಹೇಳಿದರು.

ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸದಸ್ಯರಾದ ಮನು ಬಳಿಗಾರ್, ನೀಲಕಂಠೇಗೌಡ, ಪ್ರಾಚಾರ್ಯ ಬಿ.ವಿ.ವಸಂತಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥೆ ಎಂ.ದೇವಮ್ಮಣ್ಣಿ, ಸಹಾಯಕ ಟಿ.ಎಲ್.ಜಗದೀಶ್ ಇನ್ನಿತರರಿದ್ದರು.


ಓದಿಕೊಂಡು ಸಂಶೋಧನೆ ಮಾಡಿ


ಅಧ್ಯಯನವನ್ನು ಹಲವು ಆಯಾಮದಿಂದ ಮಾಡಬೇಕು. ಜತೆಗೆ, ಕೆಲ ವಿಷಯಗಳನ್ನು ಓದಿಕೊಳ್ಳುವ ಮೂಲಕ ಸಂಶೋಧನೆಗೆ ಸಿದ್ಧವಾಗಬೇಕು ಎಂದು ಸಾಹಿತಿ ಬಂಜಗೆರೆ ಜಯಪ್ರಕಾಶ್ ಹೇಳಿದರು.


‘ಕನ್ನಡ ಸಂಶೋಧನೆ ಮತ್ತು ಅನ್ಯಜ್ಞಾನ ಶಿಸ್ತುಗಳು’ ವಿಷಯ ಕುರಿತು ಮಾತನಾಡಿದ ಅವರು, ಅಧ್ಯಯನಕಾರರು ಸಾಹಿತ್ಯವನ್ನು ಹಿಡಿಯಾಗಿ ನೋಡುವುದು ಸಮಂಜಸವಲ್ಲ. ಅಧ್ಯಯನವೂ ಅಷ್ಟೇ ಅದು ಬಿಡಿಸಿ ನೋಡಬೇಕು. ಸಂಶೋಧನೆ ಮಾಡುವಾಗ ಒಳಗಣ್ಣಿನಿಂದ ಗ್ರಹಿಸಬೇಕು. ಅನ್ಯ ಅಧ್ಯಯನ ಶಿಸ್ತಿನಿಂದ ವಿವಿಧ ಮಾಹಿತಿ ಸಂಗ್ರಹಿಸಬೇಕು ಎಂದು ಸಲಹೆ ನೀಡಿದರು.


ಅಂತರಶಿಸ್ತೀಯ ಮತ್ತು ಬಹುಶಿಸ್ತೀಯ ಸಂಶೋಧನೆ ಕುರಿತು ವಿಮರ್ಶಕಿ ಗೀತಾ ವಸಂತ ಪ್ರಬಂಧ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net