

ಕುಮಟಾ: ಪಟ್ಟಣದ ವನ್ನಳ್ಳಿಯ ಗೋಳಿಬೀರಪ್ಪ ಮಂದಿರದ ಎದುರಿನ ವಿಶಾಲ ಕೆರೆಯನ್ನು ಗುರುವಾರ ವೀಕ್ಷಿಸಿದ ಶಾಸಕ ದಿನಕರ ಶೆಟ್ಟಿ ಹಂತಹಂತವಾಗಿ ಕೆರೆ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲು ಸಹಮತ ವ್ಯಕ್ತಪಡಿಸಿದರು.
ಈ ವೇಳೆ ಶಾಸಕರಿಗೆ ಗೋಳಿಬೀರಪ್ಪ ಮಂದಿರದ ಪುರಾತನ ಕೆರೆಯ ಮಹತ್ವ ತಿಳಿಸಿದ ಪುರಸಭೆಯ ಉಪಾಧ್ಯಕ್ಷ ಮಹೇಶ ನಾಯಕ, ಅರ್ಧ ಎಕರೆಗೂ ಹೆಚ್ಚು ಪ್ರದೇಶದಲ್ಲಿ ವ್ಯಾಪಿಸಿರುವ ಹಳೆಯ ಕೆರೆ ಇದಾಗಿದ್ದು, ವರ್ಷವಿಡೀ ಸಿಹಿ ನೀರು ಇರುತ್ತದೆ. ಆದರೆ, ಹಲವು ವರ್ಷಗಳಿಂದ ನಿರ್ವಹಣೆ ಹಾಗೂ ಅಭಿವೃದ್ಧಿಯಿಲ್ಲದೇ ಕಳೆ ಗಿಡಗಳು ಬೆಳೆದು ಪಾಳು ಬಿದ್ದಂತಾಗಿದೆ. ಕೆರೆ ಸ್ವಚ್ಛಗೊಳಿಸಿ, ಹೂಳೆತ್ತಿ, ಅಭಿವೃದ್ಧಿಪಡಿಸಿದರೆ ಈ ಭಾಗದ ಕುಡಿಯುವ ನೀರು ಹಾಗೂ ಕೃಷಿ ಕಾರ್ಯಕ್ಕೆ ಅತ್ಯಂತ ಪ್ರಯೋಜನವಾಗಲಿದೆ. ಕೆರೆ ವಿಶಾಲವಾಗಿರುವುದರಿಂದ ಭವಿಷ್ಯದಲ್ಲಿ ಉತ್ತಮ ಈಜುಕೊಳ ಮಾಡುವ ಚಿಂತನೆಗೂ ಅವಕಾಶವಿದೆ ಎಂದರು.
ನಮ್ಮ ಹಳೆಯ ಕೆರೆಕಟ್ಟೆಗಳು ಸ್ವಚ್ಛ ಹಾಗೂ ಸುಸ್ಥಿರವಾಗಿದ್ದರೆ ಗ್ರಾಮದ ಅಂತರ್ಜಲ ವ್ಯವಸ್ಥೆ ಉತ್ತಮವಾಗಿರುತ್ತದೆ ಎಂದು ತಿಳಿಸಿದ ಶಾಸಕ ದಿನಕರ ಶೆಟ್ಟಿ, ಕೂಡಲೇ ಕೆರೆ ಸ್ವಚ್ಛಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪುರಸಭೆ ಅಧ್ಯಕ್ಷೆ ಸುಮತಿ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಸೂರ್ಯಕಾಂತ ಗೌಡ, ಸದಸ್ಯೆ ಮೋಹಿನಿ ಗೌಡ, ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಇಂಜಿನಿಯರ್ ಉಮೇಶ ಮಡಿವಾಳ, ಸ್ಥಳೀಯರಾದ ನಿತ್ಯಾನಂದ ನಾಯ್ಕ ಇತರರಿದ್ದರು.