

ಬೆಂಗಳೂರು ಗ್ರಾಮಾಂತರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶದಂತೆ ಜು.1 ರಿಂದ 7 ದಿನಗಳ ಕಾಲ ಕರ್ನಾಟಕ ರೈತ ಸುರಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಚಾರ ಆಂದೋಲನ ವಾಹನ ಜಿಲ್ಲೆಯಾದ್ಯಂತ ಸಂಚರಿಸಿ ಅರಿವು ಮೂಡಿಸಲಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು.
ದೇವನಹಳ್ಳಿಯ ಜಿಲ್ಲಾಡಳಿತ ಭವನ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯಿಂದ ಆಯೋಜಿಸಿದ್ದ 2022&23ನೇ ಸಾಲಿನ ಮುಂಗಾರು ಹಂಗಾಮಿನ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಪ್ರಚಾರ ಆಂದೋಲನ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ವಾಹನವೂ ಜಿಲ್ಲೆಯ ನಾಲ್ಕೂ ತಾಲೂಕಿನಲ್ಲಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಲಿದೆ. ಈ ಯೋಜನೆಯಡಿ 10 ಬೆಳೆಗಳನ್ನು ಗುರುತಿಸಲಾಗಿದ್ದು, ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮಾ ನೋಂದಣಿ ಮಾಡಿಕೊಳ್ಳುವ ಮೂಲಕ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಧಾರ್ ಜೋಡಣೆಯಾಗಬೇಕು: ರೈತರ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆಯಾಗದ ಕಾರಣ ಇದುವರೆಗೂ ವಿಮಾ ಪರಿಹಾರ ಹಣ ದೊರೆಯದೆ ವಂಚಿತರಾಗಿರುವ ರೈತರು ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಿಸಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿ ಅಥವಾ ಸಹಾಯ ಬೇಕಿದ್ದರೆ ರೈತ ಸಂಪರ್ಕ ಕೇಂದ್ರಗಳು ಹಾಗೂ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ವ್ಯಾಪಕ ಪ್ರಚಾರ ಅವಶ್ಯ: ಸಲ್ ಬಿಮಾ ಯೋಜನೆಯ ಬಗ್ಗೆ ಸಮರ್ಪಕವಾಗಿ ಮಾಹಿತಿ ಪಡೆದು ಎಲ್ಲ ರೈತರು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ವೆಂಕಟರಮಣಯ್ಯ ತಿಳಿಸಿದರು.
ಸರ್ಕಾರಗಳು ರೈತರ ಅಭ್ಯುದಯಕ್ಕಾಗಿ ಅನೇಕ ಯೋಜನೆ ರೂಪಿಸುತ್ತವೆ. ಆದರೆ ಮಾಹಿತಿ ಕೊರತೆಯಿಂದಾಗಿ ಲಾನುಭವಿಗಳು ಯೋಜನೆಗಳಿಂದ ವಂಚಿತರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಯೋಜನೆಗಳ ಬಗ್ಗೆ ವ್ಯಾಪಕ ಪ್ರಚಾರ ಮಾಡಿ, ರೈತರು ಯೋಜನೆಗೊಳಪಡುವಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.
75ನೇ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯಿಂದ ಜಿಲ್ಲೆಯಲ್ಲಿ ಈ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗಿದೆ, ಜಿಲ್ಲೆಯ 105 ಪಂಚಾಯಿತಿ ವ್ಯಾಪ್ತಿಯಲ್ಲೂ ವಾಹನ ಸಂಚರಿಸಿದೆ, 7 ದಿನಗಳ ಈ ಕಾರ್ಯಕ್ರಮದ ಸಂಪೂರ್ಣ ಯಶಸ್ಸಿಗೆ ಸಂಬಂಧಪಟ್ಟ ಅಧಿಕಾರಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ವಿಜಯಾ ಈ. ರವಿಕುಮಾರ್ ಸೂಚಿಸಿದರು.