

ಯಲ್ಲಾಪುರ: ಕಳೆದ ಎರಡು ದಿವಸಗಳಿಂದ ತಾಲೂಕಿನಲ್ಲಿ ಮಳೆ ಚುರುಕುಗೊಂಡಿದೆ.
ಬಿಟ್ಟು ಬಿಟ್ಟು ಜೋರಾಗಿ ಮಳೆ ಸುರಿಯುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಮುಂದುವರಿದಿದೆ.
ಮಳೆಯ ಪರಿಣಾಮ ಗಂಗಾವಳಿ ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು, ಅರಬೈಲ್ ಸಮೀಪದ ಫಣಸಗುಳಿ ಬಳಿಯ ಕಿರುಸೇತುವೆ ಮೇಲೆ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ಕೈಗಡಿ, ಶೇವ್ಕಾರ ಭಾಗದ ಜನರಿಗೆ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಪ್ರತಿ ವರ್ಷ ಮಳೆಗಾಲದಲ್ಲಿ ಈ ಕಿರು ಸೇತುವೆ ಮುಳುಗಡೆಯಾಗಿ ಕೈಗಡಿ, ಶೇವ್ಕಾರ ಭಾಗದ ಜನರಿಗೆ ಸಮಸ್ಯೆಯಾಗುತ್ತಿದೆ. ಕಳೆದ ವರ್ಷ ಇದೇ ಸೇತುವೆ ಮೇಲೆ ನೀರು ಹರಿಯುತ್ತಿರುವಾಗ ಲಾರಿಯನ್ನು ಚಲಾಯಿಸಲು ಪ್ರಯತ್ನಿಸಿ, ಲಾರಿ ಸಮೇತ ಚಾಲಕ ನೀರುಪಾಲಾಗಿ ಅನಾಹುತ ಉಂಟಾಗಿತ್ತು.