94 ವಿದ್ಯಾರ್ಥಿಗಳಿಗೆ ತುಮಕೂರು ವಿಶ್ವವಿದ್ಯಾಲಯ ಪಿಎಚ್.ಡಿ

PHD
Published on

ತುಮಕೂರು: ತುಮಕೂರು ವಿವಿ 13ನೇ ಘಟಿಕೋತ್ಸವದಲ್ಲಿ 7,844 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 70 ವಿದ್ಯಾರ್ಥಿಗಳು 92 ಚಿನ್ನದ ಪದಕ ಬಾಚಿಕೊಂಡರು. 1,587 ಅಭ್ಯರ್ಥಿಗಳು ಸ್ನಾತಕೋತ್ತರ ಹಾಗೂ 6,257 ಮಂದಿ ಸ್ನಾತಕ ಪದವಿಗೆ ಭಾಜನರಾದರು. ಬೆಂಗಳೂರು ಡೈರಿ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಸಿ.ಎನ್.ಮಂಚೇಗೌಡ ಅವರಿಗೆ ವಿವಿ ಕುಲಾಧಿಪತಿ, ರಾಜ್ಯಪಾಲ ವಿ.ಆರ್.ವಾಲಾ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ವಿವಿ ಇತಿಹಾಸದಲ್ಲೇ ಅತಿಹೆಚ್ಚು 94 ಪಿಎಚ್​ಡಿ ಪದವಿ ಪ್ರದಾನ ಮಾಡಲಾಯಿತು. ಇದರಲ್ಲಿ ಉಡುಪಿಯ ಅಮೃತೇಶ್ ಸಂಸ್ಕೃತ, ಇವರ ಪತ್ನಿ ವಿಜಯಲಕ್ಷ್ಮೀ ಅರ್ಥಶಾಸ್ತ್ರದಲ್ಲಿ ಪಿಎಚ್.ಡಿಗೆ ಭಾಜನರಾದರು. ಮೂವರಿಗೆ ಡಿ.ಲಿಟ್ ಪದವಿ ನೀಡಲಾಯಿತು.

ಮನೋಹರ್​ಗೆ 5 ಚಿನ್ನ: ಎಂ.ಎಸ್ಸಿ., ಗಣಿತಶಾಸ್ತ್ರದಲ್ಲಿ 5 ಸ್ವರ್ಣ ಪದಕಗಳಿಗೆ ಕೊರಳೊಡ್ಡಿದ ಕುಣಿಗಲ್​ನ ಎಸ್.ಎಚ್.ಮನೋಹರ್ ಸಹಾಯಕ ಪ್ರಾಧ್ಯಾಪಕ ಹುದ್ದೆ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ. ಅಪ್ಪನಂತೆ ಅಧ್ಯಾಪಕ ವೃತ್ತಿಯಲ್ಲೇ ಮುಂದುವರಿಯಬೇಕೆಂಬ ಆಸೆ ಅವರದ್ದು. ತಂದೆ ಹನುಮಯ್ಯ ಖಾಸಗಿ ಕಾಲೇಜು ಉಪನ್ಯಾಸಕರಾಗಿದ್ದರು. ಒಂದೂವರೆ ವರ್ಷದ ಹಿಂದಷ್ಟೇ ತಂದೆ ಕಳೆದುಕೊಂಡಿದ್ದ ಮನೋಹರ್ ಬೆನ್ನಿಗೆ ನಿಂತಿದ್ದು ತಾಯಿ ಶೋಭಾ. ಮನೆ ನಿರ್ವಹಣೆಗೆ ಪುಟ್ಟ ಅಂಗಡಿ ತೆರೆದು ಮಗನ ವಿದ್ಯಾಭ್ಯಾಸಕ್ಕೆ ನೆರವಾದರು. ಮಗನ ಸಾಧನೆ ಕಂಡ ಅಮ್ಮನ ಖುಷಿಗೆ ಪಾರವೇ ಇರಲಿಲ್ಲ.

ಚಿನ್ನದ ಸಾಧನೆ: ತುಮಕೂರು ತಾಲೂಕಿನ ಮಸ್ಕಲ್ ಗ್ರಾಮದ ಎಂ.ಸಿ.ದಿವ್ಯಾಮಣಿ ಎಂ.ಕಾಂ.ನಲ್ಲಿ 4 ಚಿನ್ನದ ಪದಕ ಬಾಚಿಕೊಂಡರು. ತಂದೆ ಚಿಕ್ಕರಾಮಯ್ಯ ಸಣ್ಣ ರೈತ. ತಾಯಿ ತುಳಸಮ್ಮ ಗೃಹಿಣಿ. ನಗರದ ಟಿ.ಡಿ.ಲಾವಣ್ಯ ಎಂ.ಎ. ಕನ್ನಡದಲ್ಲಿ 3 ಚಿನ್ನದ ಪದಕ ಗಳಿಸಿದ್ದು ಈಕೆಯ ತಂದೆ ದಶರಥ ಚಿನ್ನಾಭರಣ ಅಂಗಡಿಯೊಂದರಲ್ಲಿ ಕಾರ್ವಿುಕರಾಗಿ ದುಡಿಯುತ್ತಾರೆ. ತಾಯಿ ನಾಗರತ್ನ ಗೃಹಿಣಿ. 4 ಹೆಣ್ಣುಮಕ್ಕಳಲ್ಲಿ ಕೊನೆ ಮಗಳು ಲಾವಣ್ಯ. ಕಿರಿಯ ಸಂಶೋಧನಾ ಫೆಲೋಶಿಪ್ (ಜೆಆರ್​ಎಫ್) ಪಡೆದು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವ ಕನಸು ಆಕೆಯದ್ದು.

ಗೌನ್​ಗೆ ಗುಡ್​ಬೈ!: ವಿದ್ಯಾರ್ಥಿಗಳಿಗೆ ಸಂಪ್ರದಾಯದಂತೆ ನೀಡುತ್ತಿದ್ದ ಗೌನ್ ಹಾಗೂ ಟೋಪಿಗಳಿಗೆ ಘಟಿಕೋತ್ಸವದಲ್ಲಿ ಗುಡ್​ಬೈ ಹೇಳಲಾಗಿತ್ತು. ಅತಿಥಿ, ಗಣ್ಯರಿಗೆ ಗೌನ್ ಇತ್ತಾದರೂ ಟೋಪಿ ನೀಡಲಿಲ್ಲ. ಬ್ರಿಟಿಷರ ಕಾಲದ ಸಂಪ್ರದಾಯಕ್ಕೆ ತಿಲಾಂಜಲಿ ಹೇಳಿದ ವಿದ್ಯಾರ್ಥಿಗಳು ಖಾದಿ ಶ್ವೇತವಸ್ತ್ರದಲ್ಲಿ ಕಾಣಿಸಿದ್ದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net