ಪಿಎಚ್.ಡಿ ಮಾನದಂಡ ಸಡಿಲಿಕೆ: ಬೆಂಗಳೂರು ವಿವಿ ನಿರ್ಧಾರ, ಹಲವು ವಿದ್ಯಾರ್ಥಿಗಳಿಗೆ ಉಪಯೋಗ

BNG uni 22 jan 20
Published on

ಬೆಂಗಳೂರು: ಪಿಎಚ್.ಡಿ ವಿದ್ಯಾರ್ಥಿಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ ಸಿಹಿ ಸುದ್ದಿ ನೀಡಿದೆ. ಮೆರಿಟ್ ಪಟ್ಟಿಗೆ ಅರ್ಹತೆ ಪಡೆಯಲು ನಿಗದಿಪಡಿಸಿದ್ದ ಅಂಕವನ್ನು ಸಡಿಲಿಕೆ ಮಾಡಲು ನಿರ್ಧರಿಸಿದೆ. ಇದರಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದೆ.

ಪಿಎಚ್.ಡಿ ನಿಯಮಗಳ ಪ್ರಕಾರ ಪ್ರವೇಶಪರೀಕ್ಷೆ ಬರೆದ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ತೆಗೆದುಕೊಂಡ ಶೇ.50 ಅಂಕಗಳು ಮತ್ತು ಸ್ನಾತಕೋತ್ತರ ಪದವಿ (ಪಿ.ಜಿ)ಯಲ್ಲಿ ತೆಗೆದುಕೊಂಡ ಅಂಕಗಳನ್ನು ಶೇ.50ಕ್ಕೆ ಲೆಕ್ಕ ಹಾಕಿ ಮೆರಿಟ್ ಪಟ್ಟಿ ಸಿದ್ಧಪಡಿಸುತ್ತಿತ್ತು. ಈ ವರ್ಷ ಈ ಮಾನದಂಡದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಇರುವಂತೆಯೇ ಹಿಂದುಳಿದ ವರ್ಗದವರಿಗೂ ಸಡಿಲಿಕೆ ಮಾಡಿ ಶೇ.45ಕ್ಕೆ ಇಳಿಸಲು ನಿರ್ಧರಿಸಿದೆ. ಇದರಿಂದ ಕೆಲವೇ ಅಂಕಗಳಿಂದ ಹೊರಗುಳಿಯುತ್ತಿದ್ದ ವಿದ್ಯಾರ್ಥಿಗಳಿಗೆ ಮೆರಿಟ್ ಪಟ್ಟಿ ಸೇರುವ ಅವಕಾಶ ಸಿಗಲಿದೆ. ರಾಜ್ಯದಲ್ಲಿರುವ ಬೇರೆ ವಿವಿಗಳು ಈ ರೀತಿ ನಿಯಮ ಸಡಿಲಿಕೆ ಮಾಡಿರುವ ಉದಾಹರಣೆಗಳಿವೆ. ಅರ್ಹತಾ ಮಾನದಂಡ ಸಡಿಲಿಕೆಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗದಲ್ಲಿ (ಯುಜಿಸಿ) ಅವಕಾಶವಿದೆ. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದು ಒಪ್ಪಿಗೆ ಪಡೆಯಬೇಕಿದೆ. ನಿಯಮದಲ್ಲಿ ಅವಕಾಶವಿರುವುದರಿಂದ ಅನುಮತಿ ಸುಲಭವಾಗಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ಏಕೆ ಈ ನಿರ್ಧಾರ?: ಈ ವರ್ಷ ಮೈಸೂರು ವಿಶ್ವವಿದ್ಯಾಲಯ ಕೆ-ಸೆಟ್ ಪರೀಕ್ಷೆಗೆ ನೀಡಿರುವ ಪಠ್ಯಕ್ರಮವನ್ನೇ ಯಥಾವತ್ತಾಗಿ ಬೆಂ.ವಿವಿ ಪಿಎಚ್.ಡಿ ಪ್ರವೇಶ ಪರೀಕ್ಷೆಗೂ ನೀಡಲಾಗಿತ್ತು. ಕನಿಷ್ಠ ಶೀರ್ಷಿಕೆ ಸಹ ಬದಲು ಮಾಡಿರಲಿಲ್ಲ. ಉಪನ್ಯಾಸಕರ ಆಯ್ಕೆಗೆ ನಡೆಸುವ ಪಠ್ಯಕ್ರಮವನ್ನೇ ವಿದ್ಯಾರ್ಥಿಗಳಿಗೆ ನೀಡಿರುವುದು ಸರಿಯಲ್ಲ. ಇದರಿಂದ ವಿದ್ಯಾರ್ಥಿಗಳು ಉತ್ತೀರ್ಣರಾಗುವುದು ಕಷ್ಟವಾಗಲಿದೆ ಎಂದು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದರು. ಡಿ.29ರಂದು ನಗರದ ಐದು ಕೇಂದ್ರಗಳಲ್ಲಿ ನಡೆದಿದ್ದ ಪಿಎಚ್.ಡಿ ಪ್ರವೇಶಪರೀಕ್ಷೆಗೆ 2,058 ಅಭ್ಯರ್ಥಿಗಳು ಹಾಜರಾಗಿದ್ದರು.

ನಿಯಮ ಸಡಿಲಿಕೆ ಮಾಡಬೇಕೆಂಬುದು ಸಾವಿರಾರು ವಿದ್ಯಾರ್ಥಿಗಳ ಬೇಡಿಕೆ ಯಾಗಿತ್ತು. ಕೊನೆಗೂ ವಿವಿ ಉತ್ತಮ ನಿರ್ಧಾರ ತೆಗೆದುಕೊಂಡಿದೆ. |ಡಾ. ಸಿ. ಶಿವರಾಜು ಮೌಲ್ಯಮಾಪನ ಕುಲಸಚಿವ, ಬೆಂ.ವಿವಿ

ಹೆಚ್ಚುವರಿ ಸೀಟು

ಪಿಎಚ್.ಡಿಗೆ ಬೆಂ.ವಿವಿ ಅಧಿಸೂಚನೆ ಹೊರಡಿಸಿದಾಗ 37 ವಿಷಯಗಳಿಂದ 482 ಸೀಟುಗಳು ಲಭ್ಯವಿದ್ದವು. ಆದರೆ, ಇದೀಗ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಪ್ರಬಂಧವನ್ನು ಮಾರ್ಗದರ್ಶಕರಿಗೆ ಸಲ್ಲಿಕೆ ಮಾಡಿದ್ದು, ಸೀಟುಗಳ ಪ್ರಮಾಣ 650ಕ್ಕೆ ಏರಿಕೆಯಾಗಲಿದೆ. ಅಂದಾಜು 150ಕ್ಕೂ ಹೆಚ್ಚಿನ ಸೀಟುಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಸದ್ಯ ಎಲ್ಲ ವಿಭಾಗಗಳಿಂದ ಖಾಲಿ ಇರುವ ಸೀಟುಗಳ ಮಾಹಿತಿ ಪಡೆಯುತ್ತಿದ್ದು, ಸಂಪೂರ್ಣ ಮಾಹಿತಿ ಸಿಕ್ಕ ಬಳಿಕ ಹಾಗೂ ನಿಯಮ ಸಡಿಲಿಕೆ ಅಧಿಕೃತವಾಗಿ ಆದೇಶವಾದ ನಂತರ ಮೆರಿಟ್ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ.

ಅವಶ್ಯಕ ಅರ್ಹ ಅಭ್ಯರ್ಥಿಗಳು ಇಲ್ಲದಿ ರುವುದರಿಂದ ಮಾನದಂಡದಲ್ಲಿ ಸಡಿಲಿಕೆ ಮಾಡಲು ತೀರ್ವನಿಸಿದ್ದೇವೆ. ಶೀಘ್ರದಲ್ಲೇ ಮೆರಿಟ್ ಪಟ್ಟಿ ಬಿಡುಗಡೆ ಮಾಡುತ್ತೇವೆ. | ಡಾ. ಕೆ.ಆರ್. ವೇಣುಗೋಪಾಲ್ ಬೆಂ.ವಿವಿ ಕುಲಪತಿ

| ದೇವರಾಜ್ ಎಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net