

ಸಂಶೋಧನಾರ್ಥಿಗಳಿಗೆ ತೀವ್ರ ಸಂಕಷ್ಟ
ವೀರೇAದ್ರ ನಾಗಲದಿನ್ನಿ ಹೊಸಪೇಟೆ
ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯವು ತನ್ನ ಹಣಕಾಸು ಸ್ಥಿತಿಯನ್ನು ಸರಿದೂಗಿಸಿಕೊಳ್ಳ ಲು ಪಿಎಚ್‌ಡಿ ಪ್ರವೇಶ ಶುಲ್ಕವನ್ನು ಗಣನೀಯವಾಗಿ ಹೆಚ್ಚಳ ಮಾಡಿದೆ. ಇದರಿಂದಾಗಿ ಕನ್ನಡ ವಿವಿಯಲ್ಲಿ ಸಂಶೋಧನೆಗೈಯುವ ಕನಸು ಕಟ್ಟಿಕೊಂಡಿರುವ ನೂರಾರು ಬಡ ಅಭ್ಯರ್ಥಿಗಳನ್ನು ಸಂಷ್ಟಕ್ಕೆ ದೂಡಿದಂತಾಗಿದೆ.
ಕಳೆದ ೨೦೨೨ರ ಜುಲೈನಲ್ಲಿ ಪಿಎಚ್‌ಡಿ ಪ್ರವೇಶಕ್ಕೆ ಅರ್ಜಿ ಕರೆಯಲಾಗಿತ್ತು. ಕನ್ನಡ ವಿಶ್ವವಿದ್ಯಾಲಯದ ಆರ್ಥಿಕ ಸಮಸ್ಯೆ, ಶಿಷ್ಯ ವೇತನಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ, ಘಟಿಕೋತ್ಸವದ ವಿವಾದ, ಕುಲಪತಿ ಮತ್ತು ಪ್ರಾಧ್ಯಾಪಕರ ಸಂಘದ ನಡುವಿನ ತಿಕ್ಕಾಟ ಮತ್ತಿತರೆ ಕಾರಣಗಳಿಂದಾಗಿ ಸಂಶೋಧನಾರ್ಥಿಗಳ ಪ್ರವೇಶ ಪ್ರಕ್ರಿಯೆ ವಿಳಂಬವಾಗಿತ್ತು. ಗರಿಷ್ಟ ಮೂರು ತಿಂಗಳಲ್ಲಿ ಪೂರ್ಣಗೊಳ್ಳಬೇಕಾದ ಪ್ರವೇಶ ಪ್ರಕ್ರಿಯೆ, ಬರೋಬ್ಬರಿ ಒಂದು ವರ್ಷದ ಬಳಿಕ ಇದೀಗ ಮುಕ್ತಾಯದ ಹಂತಕ್ಕೆ ತಲುಪಿದೆ.
ಕಳೆದ ಬುಧವಾರವಷ್ಟೇ ಪಿಎಚ್‌ಡಿ ಸಿಇಟಿ ಫಲಿತಾಂಶ ಪ್ರಕಟಗೊಂಡಿದೆ. ಕನ್ನಡ ವಿವಿಯಲ್ಲಿರುವ ವಿಜ್ಞಾನ ನಿಕಾಯ ಹೊರತಾಗಿ ಭಾಷಾ ನಿಕಾಯ, ಸಮಾಜ ವಿಜ್ಞಾನ ಮತ್ತು ಲಲಿತಾ ಕಲೆ ನಿಕಾಯದ ವಿವಿಧ ವಿಭಾಗಗಳಲ್ಲಿ ಸಂಶೋಧನೆಗೆ ಅವಕಾಶ ಕಲ್ಪಿಸಲಾಗುತ್ತದೆ. ಮೂರು ನಿಕಾಯಗಳಡಿ ಒಟ್ಟು ೯೮೧ ಸಾಮಾನ್ಯ ಪ್ರವೇಶ ಪರೀಕ್ಷೆ ಎದುರಿಸಿದ್ದರು. ಆ ಪೈಕಿ ಒಟ್ಟು ೨೫೯ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದರಲ್ಲಿ ೭೬ ಜನರು ಕಾಯ್ದಿರಿಸಿದ ಪಟ್ಟಿಯಲ್ಲಿದ್ದಾರೆ. ಹೀಗಾಗಿ ಪಿಎಚ್‌ಡಿ ಪ್ರವೇಶಕ್ಕೆ ಅರ್ಹತೆ ಪಡೆದವರು ನಿಟ್ಟುಸಿರು ಬಿಡುವ ಮುನ್ನವೇ ಪ್ರವೇಶ ಶುಲ್ಕ ಹೊರೆ ಹೆಗಲೇರುತ್ತಿದೆ.
ಶುಲ್ಕಗಳು ಬಹುತೇಕ ದುಪ್ಪಟ್ಟು:
ಆರ್ಥಿಕ ಸಮಸ್ಯೆಯನ್ನು ತಕ್ಕಮಟ್ಟಿಗೆ ನೀಗಿಸಲು ಪಿಎಚ್‌ಡಿ ಪ್ರವೇಶ ಮತ್ತಿತರೆ ಶುಲ್ಕಗಳನ್ನು ಬಹುತೇಕ ದುಪ್ಪಟ್ಟುಗೊಳಿಸಿದೆ. ಸ್ಥಾಯಿ ನಿಧಿ, ಕ್ರೀಡೆ ಮತ್ತು ವೈದ್ಯಕೀಯ ಶುಲ್ಕವನ್ನು ತಲಾ ಒಂದು ಸಾವಿರ ರೂ. ಹೊಸದಾಗಿ ಸೇರ್ಪಡೆಗೊಳಿಸಿದೆ. ಅದರೊಂದಿಗೆ ಪ್ರವೇಶ ಶುಲ್ಕ, ತಾತ್ಕಾಲಿಕ ಪ್ರವೇಶ ಶುಲ್ಕ, ಕೋರ್ಸ್ವರ್ಕ್ ಶುಲ್ಕ, ಅರ್ಧ ವಾರ್ಷಿಕ ಶುಲ್ಕ, ಪ್ರಬಂಧ ಮಂಡನೆ, ಗ್ರಂಥಾಲಯ, ಘಟಿಕೋತ್ಸವ ಹಾಗೂ ಮಾರ್ಗದರ್ಶಿಗಳ ಬದಲಾವಣೆ, ಅಂಕಪಟ್ಟಿ, ಅಧಿಸೂಚನೆ, ಪ್ರಮಾಣ ಪತ್ರಗಳ ತಿದ್ದುಪಡಿ ಸೇರಿದಂತೆ ಬಹುತೇಕ ಶುಲ್ಕಗಳು ಎರಡರಷ್ಟು ಹೆಚ್ಚಿಸಿದೆ. ಪರಿಣಾಮ ೩೬ ಸಾವಿರ ರೂ.ಗಳಲ್ಲಿ
ಪೂರ್ಣಗೊಳ್ಳುತ್ತಿದ್ದ ಪಿಎಚ್‌ಡಿ ಪದವಿ ಪರಿಷ್ಕೃತ ಶುಲ್ಕದಿಂದ ೬೫ ಸಾವಿರ ರೂ.ಗಿಂತ ಹೆಚ್ಚು ವೆಚ್ಚವಾಗಲಿದೆ. ಕನ್ನಡ ವಿವಿಯಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಕುರಿತು ಬಹುತೇಕ ಗ್ರಾಮೀಣ ಮತ್ತು ಬಡ ಅಭ್ಯರ್ಥಿಗಳೇ ಸಂಶೋಧನೆ ನಡೆಸುವುದರಿಂದ ಶುಲ್ಕ ಹೊರೆಯಾಗಲಿದೆ ಎಂಬುದು ಸಂಶೋಧನಾರ್ಥಿಗಳ ಬೇಸರ.
ನಿಯಮ ಮೀರಿ ಹೆಚ್ಚಳ?
ರಾಜ್ಯದ ಎಲ್ಲ ವಿಶ್ವವಿದ್ಯಾಲಗಳು ವಾರ್ಷಿಕ ಶೇ.೧೦ ರಷ್ಟು ಶುಲ್ಕವನ್ನು ಹೆಚ್ಚಿಸಲು ಅವಕಾಶ ನೀಡಲಾಗಿದೆ. ಅಲ್ಲದೇ, ವಿವಿಯಲ್ಲಿ ಹೊಸದಾಗಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಿದ್ದರೆ, ಅದರ ನಿರ್ವಹಣಾ ವೆಚ್ಚವನ್ನು ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಪ ಪ್ರಮಾಣದಲ್ಲಿ ಶುಲ್ಕ ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಸಂಬAಧಿಸಿ ಹೇಳಿಕೊಳ್ಳುವಂತ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಆದರೆ, ಕನ್ನಡ ವಿಶ್ವವಿದ್ಯಾಲಯದ ಆರ್ಥಿಕ ಸಂಪನ್ಮೂಲ ಇಲ್ಲದೇ ಸೊರಗುತ್ತಿದೆ. ಇದೇ ಕಾರಣಕ್ಕೆ ಹಲವು ಕಾರ್ಯಚಟುವಟಿಕೆಗಳು ಕುಂಟಿತವಾಗಿವೆ. ಅವುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸಂಶೋಧನಾರ್ಥಿಗಳಿಗೆ ಹೊರೆ ಹಾಕಲಾಗಿದೆ ಎಂಬುದು ಸಂಶೋಧನಾರ್ಥಿಗಳ ಆರೋಪ.
ಪ್ರವೇಶ ಶುಲ್ಕ ೬೦೦ ೧೦೦೦
ತಾತ್ಕಾಲಿಕ ಪ್ರವೇಶ ಶುಲ್ಕ ೧೧೦೦ ೨೦೦೦
ಕೋರ್ಸ್ವರ್ಕ್ ಶುಲ್ಕ ೨೫೦೦ ೫೦೦೦
ಅರ್ಧ ವಾರ್ಷಿಕ ಶುಲ್ಕ ೩೦೦೦ ೫೦೦೦
ಗ್ರಂಥಾಲಯ ಶುಲ್ಕ ೧೧೦೦ ೨೦೦೦
ಅವಧಿ ವಿಸ್ತರಣೆ ೬೦೦೦ ೧೦,೦೦೦
ಪ್ರಬಂಧ ಸಲ್ಲಿಕೆ ೭೦೦೦ ೧೦,೦೦೦
೨೦೧೬-೧೭ನೇ ಸಾಲಿನ ಬಳಿಕ ಶುಲ್ಕ ಪರಿಷ್ಕರಣೆಯಾಗಿಲ್ಲ. ಹೀಗಾಗಿ ಈ ಬಾರಿ ಶುಲ್ಕ ಹೆಚ್ಚಿಸಲಾಗಿದೆ. ಆದರೆ, ಇತರೆ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ, ನಮ್ಮಲ್ಲೆ ಅತ್ಯಂತ ಕಡಿಮೆ ಶುಲ್ಕವಿದೆ. ಪಕ್ಕದ ಬಳ್ಳಾರಿಯ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಶುಲ್ಕಕ್ಕಿಂತ ನಮ್ಮಲ್ಲಿ ಕಡಿಮೆಯಿದೆ.
ಡಾ.ಮಹಾದೇವಯ್ಯ, ಕನ್ನಡ ವಿವಿ ಅಧ್ಯಯನಾಂಗದ ನಿರ್ದೇಶಕ.