

ಕಿರುವಾರ ಎಸ್. ಸುದರ್ಶನ್ ಕೋಲಾರ: ನಗರ ಸೇರಿ ಗ್ರಾಮೀಣ ಭಾಗದಲ್ಲಿ ಪಿಜಿಗಳು (ಪೇಯಿಂಗ್ ಗೆಸ್ಟ್) ನಾಯಿ ಕೊಡೆಗಳಂತೆ ತಲೆಯೆತ್ತುತ್ತಿದ್ದು, ಇವುಗಳ ಮೇಲೆ ಯಾವುದೇ ಇಲಾಖೆಯ ನಿಯಂತ್ರಣ ಇಲ್ಲದಂತಾಗಿದೆ.
ಜಿಲ್ಲೆಯ ಮಾಲೂರು, ನರಸಾಪುರ ಹಾಗೂ ವೇಮಗಲ್ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದ ಬೆನ್ನಲ್ಲೇ ಉದ್ಯೋಗ ಸೃಷ್ಟಿಯೂ ಹೆಚ್ಚಾಗಿದೆ. ಕಂಪನಿಗಳಿಗೆ ಕೆಲಸಕ್ಕಾಗಿ ಸ್ಥಳಿಯ, ರಾಜ್ಯ, ಬೇರೆ ಬೇರೆ ಜಿಲ್ಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಕಾರ್ಮಿಕರು ಆಗಮಿಸುತ್ತಿದ್ದು, ಇದರಿಂದಾಗಿ ವಸತಿಗಾಗಿ ಬೇಡಿಕೆ ಹೆಚ್ಚಾಗಿದೆ.
ಇದರಿಂದಾಗಿ ಪಿಜಿಗಳು ತಲೆಯೆತ್ತುತ್ತಿವೆ.
ನರಸಾಪುರ, ಬೆಳ್ಳೂರು, ಅರಾಭಿಕೊತ್ತೂರು, ವಕ್ಕಲೇರಿ ಗ್ರಾಮ ಪಂಚಾಯಿತಿ, ವೇಮಗಲ್ ಪಟ್ಟಣ ಪಂಚಾಯಿತಿ, ಮಾಲೂರು ತಾಲೂಕು ಸುತ್ತಮುತ್ತಲು ಖಾಲಿ ಮನೆಗಳನ್ನು, ಮುಚ್ಚಿರುವ ಖಾಸಗಿ ಶಾಲೆ, ರೇಷ್ಮೆ ಹುಳು ಸಾಕಣೆ ಮನೆಗಳು ಮತ್ತು ಕಲ್ಯಾಣ ಮಂಟಪಗಳನ್ನು ಪಿಜಿಗಳನ್ನಾಗಿ ಬದಲಾಯಿಸಿ ಸುಲಭವಾಗಿ ದುಡ್ಡು ಮಾಡುವ ಉಪಾಯ ಕಂಡುಕೊಳ್ಳಲಾಗಿದೆ.
ವಸತಿ ಕಲ್ಪಿಸಲು ಏಜೆನ್ಸಿ: ಕಂಪನಿಗಳಲ್ಲಿ ಕೆಲಸಕ್ಕೆ ಸೇರುವ ಕಾರ್ಮಿಕರಿಗೆ ವಸತಿ ಕಲ್ಪಿಸಲು ಏಜೆನ್ಸಿಗಳು ಹುಟ್ಟಿಕೊಂಡಿವೆ. ಅವರು ಕಂಪನಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕಟ್ಟಡ ಹುಡುಕಾಡಿ ಬಾಡಿಗೆಗೆ ನೀಡುತ್ತಿದ್ದಾರೆ.ಕಂಪನಿ ನಿಗದಿಪಡಿಸಿಕೊಂಡಿರುವ ಏಜೆನ್ಸಿಗಳು ಉದ್ಯೋಗಿಯೊಬ್ಬರಿಗೆ ಒಂದು ತಿಂಗಳಿಗೆ ತಲಾ 2,000 ದಿಂದ 2,500 ರೂ.ಗಳವರೆಗೆ ಬಾಡಿಗೆ ವಸೂಲಿ ಮಾಡುತ್ತಿವೆ. ಅದರ ಲಾಭ ಪಡೆಯಲು ಮುಂದಾಗಿರುವ ಏಜೆನ್ಸಿಯವರು ಖಾಲಿಯಿರುವ ಮನೆ, ಕಟ್ಟಡಗಳನ್ನು ಬಾಡಿಗೆಗೆ ಪಡೆದುಕೊಂಡು ಪಿಜಿಗಳನ್ನು ಆರಂಭಿಸುತ್ತಿದ್ದಾರೆ. 3&4 ಮಂದಿ ವಾಸ ಮಾಡುವ ಮನೆಗೆ 8 ರಿಂದ 10 ಮಂದಿಯನ್ನು ತುಂಬುತ್ತಿರುವ ಆರೋಪ ಕೇಳಿ ಬಂದಿದೆ.ಸದ್ಯ ಪಿಜಿ ಗೃಹಗಳಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುತ್ತಿಲ್ಲ, ಸರ್ಕಾರ ವಿಧಿಸಿರುವ ನಿಯಮ ಉಲ್ಲಂಘಿಸಿ ಪಿಜಿ ಸ್ಥಾಪನೆ ಮಾಡುತ್ತಿದ್ದು, ಅನಾಹುತ ಸಂಭವಿಸುವ ಮೊದಲೇ ಜಿಲ್ಲಾಡಳಿತ, ಪೊಲೀಸ್ ಇಲಾಖಾಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ.
ಮಾಲೀಕರಿಗೆ ಆತಂಕ: ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಉದ್ಯೋಗಿಗಳಿಗಾಗಿ ನರಸಾಪುರ ಕೈಗಾರಿಕೆ ಪ್ರದೇಶದಲ್ಲಿ, 173 ಕೋಟಿ ರೂ. ವೆಚ್ಚದಲ್ಲಿ 6000 ಸಾಮರ್ಥ್ಯದ ಮಹಿಳಾ ವಸತಿ ನಿಲಯವನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರವು ಯೋಜನೆ ರೂಪಿಸಿದೆ. ಇದರಿಂದಾಗಿ ಸ್ಥಳಿಯ ಪಿಜಿ ಗೃಹ ಮಾಲೀಕರಲ್ಲಿ ಆತಂಕ ಎದುರಾಗಿದೆ.
ಜವಾಬ್ದಾರಿ ಮರೆತ ಮಾಲೀಕರು: ಪಿಜಿ ವ್ಯವಸ್ಥೆ ಮಾಡುವುದರ ಜತೆಗೆ ಜವಾಬ್ದಾರಿಗಳ ಬಗ್ಗೆ ಮಾಲೀಕರಿಗೆ ಅರಿವು ಇರಬೇಕು. ವಾಸ ಇರುವವರಿಗೆ ಊಟ, ತಿಂಡಿ ವ್ಯವಸ್ಥೆ, ಶುಚಿ ಮಾಡುವ ಕೆಲಸ ವಹಿಸಿಕೊಳ್ಳಬೇಕು. ಆದರೆ ಕಾರ್ಮಿಕರಿಂದ ಹೆಚ್ಚು ಹಣ ವಸೂಲಿ ಮಾಡುವ ಜತೆಗೆ ನಿರ್ವಹಣೆ ಜವಾಬ್ದಾರಿಯನ್ನು ಅವರ ಹೆಗಲಿಗೆ ಹಾಕಿದ್ದಾರೆ. ಹೆಚ್ಚಾಗಿ ಹೆಣ್ಣು ಮಕ್ಕಳು ಪಿಜಿಗಳಲ್ಲಿ ವಾಸ ಮಾಡುತ್ತಿದ್ದು, ಭದ್ರತಾ ವ್ಯವಸ್ಥೆ ಕಲ್ಪಿಸಿಲ್ಲ. ಪಿಜಿಗಳನ್ನು ಏಜೆನ್ಸಿಗಳವರು ನೋಡಿಕೊಳ್ಳುತ್ತಿರುವುದರಿಂದ ಮಾಲೀಕರು ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಿಲ್ಲ.
ತೆರಿಗೆ ವಂಚನೆ: ಮನೆಯನ್ನೇ ಪಿಜಿಯನ್ನಾಗಿ ಪರಿವರ್ತಿಸಿದಾಗ ಅದನ್ನು ವಾಣಿಜ್ಯ ಆಸ್ತಿ ಎಂದು ಪರಿಗಣಿಸಬೇಕು. ಇದಕ್ಕೆ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಿಂದ ಅನುಮತಿ ಪಡೆದು ತೆರಿಗೆ ಪಾವತಿಸಬೇಕು. ಇದ್ಯಾವುದನ್ನೂ ಪಾಲನೆ ಮಾಡದೆ ಮನಸೋ ಇಚ್ಛೆ ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ನೀರು, ವಿದ್ಯುತ್ ಮತ್ತು ವಾಣಿಜ್ಯ ತೆರಿಗೆ ಪಾವತಿಸದೆ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ. ಪಿಜಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದಂತೆ ರಾತ್ರೋರಾತ್ರಿ ಹಳೆಯ ಮನೆಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಲಾಗುತ್ತಿದೆ. ಇವುಗಳಲ್ಲಿ ಬಹುತೇಕ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ, ನಿಮಾರ್ಣದ ಅನುಮತಿ ಪತ್ರ, ಸುರಕ್ಷತಾ ಸಲಕರಣೆ ಅಳವಡಿಕೆಯ ನಿರಾಕ್ಷೇಪಣಾ ಪತ್ರಗಳನ್ನು ಪಡೆಯಬೇಕಿದ್ದರೂ, ಯಾರೂ ನಿಯಮ ಪಾಲಿಸುತ್ತಿಲ್ಲ, ಇದರ ವಿರುದ್ಧ ಕ್ರಮಕೈಗೊಳ್ಳಬೇಕಾಗಿರುವ ಸಂಬಂಧಪಟ್ಟ ಇಲಾಖಾಧಿಖಾರಿಗಳು ಮೌನವಾಗಿರುವುದು ಚರ್ಚೆಗೆ ಗ್ರಾಸವಾಗಿದೆ.
ಪಿಜಿಗಳು ಸ್ಥಾಪನೆಯಾಗುತ್ತಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಲಾಗುವುದು. ಈಗಾಗಲೇ ಸ್ಥಾಪನೆಯಾಗಿರುವ ಪಿಜಿಗಳು ಯಾವ ಸ್ಥಳಿಯ ಸಂಸ್ಥೆ ವ್ಯಾಪಿಗೆ ಬರುತ್ತವೆ ಎಂಬದರ ಮಾಹಿತಿ ಪಡೆದು ನಿಯಮಗಳ ಪಾಲನೆಗೆ ಸೂಚನೆ ನೀಡಲಾಗುವುದು. -ಬಿ.ನಿಖಿಲ್ ಎಸ್ಪಿ, ಕೋಲಾರ ವಸತಿ ಮನೆಗಳು, ಮುಚ್ಚಿರುವ ಶಾಲಾ ಕಟ್ಟಡಗಳನ್ನು ಪಿಜಿಗಳಾಗಿ ಮಾರ್ಪಾಡು ಮಾಡುತ್ತಿದ್ದು, ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಕಟ್ಟಡಗಳ ಮಾಲೀಕರು ಏಜೆಂಟರಿಗೆ ಜವಾಬ್ದಾರಿ ನೀಡುತ್ತಿದ್ದು, ಏನಾದರೂ ಅನಾಹುತ ಸಂಭವಿಸಿದರೆ ಹೊಣೆ ಯಾರು, ಆದ್ದರಿಂದ ಮುಂಜಾಗ್ರತವಾಗಿ ಜಿಲ್ಲಾಡಳಿತ ಕ್ರಮವಹಿಸಬೇಕು. - ರಾಕೇಶ್ ನಗರಸಭೆ ಸದಸ್ಯ, ಕೋಲಾರ