

ಬೆಂಗಳೂರು: ಸ್ಟೈಂಡ್ ಹೆಚ್ಚಳಕ್ಕೆ ಆಗ್ರಹಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಮೂರು ದಿನಗಳಿಂದ ವೈದ್ಯ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ವಿಕ್ಟೋರಿಯಾ ಆಸ್ಪತ್ರೆ ಆವರಣಕ್ಕೆ ಸ್ಥಳಾಂತರಿಸಲಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯ ಉದ್ಯಾನದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿರುವ ಹಿನ್ನೆಲೆಯಲ್ಲಿ ಮೂರು ದಿನಗಳ ಮಟ್ಟಿಗೆ ಪ್ರತಿಭಟನೆಯನ್ನು ಆಸ್ಪತ್ರೆ ಆವರಣಕ್ಕೆ ಸ್ಥಳಾಂತರಿಸಲಾಗಿದೆ. 17ರ ನಂತರ ಪುನಃ ಸ್ವಾತಂತ್ರ್ಯ ಉದ್ಯಾನದಲ್ಲಿಯೇ ಹೋರಾಟ ಮುಂದುವರಿಸುವುದಾಗಿ ಕರ್ನಾಟಕ ನಿವಾಸಿ ವೈದ್ಯರ ಸಂಘದ (ಕೆಎಆರ್‌ಡಿ) ಅಧ್ಯಕ್ಷ ಡಾ. ಸಿರೀಶ್ ಶಿವರಾಮಯ್ಯ ತಿಳಿಸಿದ್ದಾರೆ.
ಆಸ್ಪತ್ರೆ ಆವರಣದಲ್ಲಿ ಮೂರು ದಿನ ಪ್ರತಿಭಟನೆಯ ಭಾಗವಾಗಿ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ನೇತ್ರ ಮತ್ತು ಅಂಗಾಂಗ ದಾನ ಪ್ರತಿಜ್ಞಾವಿಧಿ ಸ್ವೀಕಾರ ಕಾರ್ಯಕ್ರಮ ನಡೆಸಲಾಗುವುದು. ಆದರೆ ಪ್ರತಿಭಟನಾನಿರತರಲ್ಲಿ ಯಾರೊಬ್ಬರೂ ಸೇವೆಗೆ ಹಾಜರಾಗುವುದಿಲ್ಲ. ಕೋಲ್ಕತದಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ವೈದ್ಯ ವಿದ್ಯಾರ್ಥಿನಿಗೆ ಸಂತಾಪ ಸೂಚಿತ ಮೆರವಣಿಗೆ ಸಹ ನಡೆಸಲಾಗುವುದು ಎಂದು ಹೇಳಿದ್ದಾರೆ.